ಬಿಪೊರ್‌ಜೊಯ್‌ ಸವಾಲು ಗೆದ್ದ ಗುಜರಾತ್‌: ಅಪಾಯ ತಪ್ಪಿಸಿಕೊಂಡಿದ್ದು ಹೀಗೆ..

First Published | Jun 17, 2023, 9:35 AM IST

ಅರಬ್ಬಿ ಸಮುದ್ರದಲ್ಲಿ ಎದ್ದ ಅತಿ ಸುದೀರ್ಘ ಬಿಪೊರ್‌ಜೊಯ್‌ ಚಂಡಮಾರುತದ ಸವಾಲನ್ನು ಗೆಲ್ಲುವಲ್ಲಿ ಗುಜರಾತ್‌ ಯಶಸ್ವಿಯಾಗಿದೆ. ಗುರುವಾರ ಸಂಜೆ 6.30ರ ಸುಮಾ​ರಿ​ಗೆ ಕಛ್‌ ಬಳಿಯ ಜಕಾವು ಬಂದರಿಗೆ ಅಪ್ಪಳಿಸಿದ ಚಂಡಮಾರುತ ತಡರಾತ್ರಿ 2.30 ರವರೆಗೂ ತನ್ನ ಪರಿಣಾಮಗಳನ್ನು ಹೊಂದಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಗುಜರಾತ್‌ನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದರೂ, ಮುನ್ನೆಚ್ಚರಿಕಾ ಕ್ರಮಗಳ ಫಲವಾಗಿ ಯಾವುದೇ ಸಾವು-ನೋವು ಸಂಭವಿಸದಂತೆ ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇತ್ತೀಚಿನ ವರ್ಷಗಳಲ್ಲೇ ಮೊದಲ ಬಾರಿ ಎಂಬಂತೆ ಚಂಡಮಾರುತಕ್ಕೆ ಒಂದೇ ಒಂದು ಸಾವು ಕೂಡಾ ಸಂಭವಿಸಿಲ್ಲ. ಆದರೆ ವಿವಿಧ ದುರ್ಘಟನೆಗಳಲ್ಲಿ 23 ಜನರು ಗಾಯಗೊಂಡಿದ್ದಾರೆ.

1 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ:
ಚಂಡಮಾರುತ ರಾಜ್ಯದ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂಬ ಮುನ್ಸೂಚನೆ ಬೆನ್ನಲ್ಲೇ, ರಾಜ್ಯ ಸರ್ಕಾರ ಸಮುದ್ರ ತೀರ ಪ್ರದೇಶಗಳಿಂದ 1 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಅಂತೆಯೇ ನಡೆದುಕೊಂಡಿತು. ಪರಿಹಾರ ಕೇಂದ್ರ ತೆರೆದು ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯ್ತು. ಹೀಗಾಗಿ ಸಾವು ಸಂಭವಿಸಲೇ ಇಲ್ಲ, ಕೇವಲ 23 ಜನರು ಗಾಯಗೊಂಡರು.

4000 ಬ್ಯಾನರ್‌ ತೆರವು
ಚಂಡಮಾರುತದ ವೇಳೆ ಬಿರುಗಾಳಿಗೆ ಭಿತ್ತಿಫಲಕಗಳು ಬಿದ್ದು ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಳವಡಿಸಲಾಗಿದ್ದ 4 ಸಾವಿರಕ್ಕೂ ಹೆಚ್ಚು ಹೋರ್ಡಿಂಗ್ಸ್‌ಗಳನ್ನು ರಾಜ್ಯ ಸರ್ಕಾರ ತೆರವುಗೊಳಿಸಿತ್ತು. ಚಂಡಮಾರುತ ಸಮಯದಲ್ಲಿ ಇವುಗಳು ಹಾರಾಡುವ ಮೂಲಕ ಈ ಹಿಂದೆ ಭಾರಿ ಅಪಾಯ ತಂದೊಡ್ಡಿದ್ದವು.

Tap to resize

ಸಿಂಹಗಳೂ ರಕ್ಷಣೆ
ಸುಮಾರು 700 ಏಷ್ಯಾಟಿಕ್‌ ಸಿಂಹಗಳ ಆವಾಸಸ್ಥಾನವಾಗಿರುವ ಗಿರ್‌ ಅರಣ್ಯದಲ್ಲೂ ಸಹ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದಕ್ಕಾಗಿ 200 ಮಂದಿಯ ತಂಡವನ್ನು ನೇಮಕ ಮಾಡಿ, ಅವರು ನಿರಂತರವಾಗಿ ಸಿಂಹಗಳ ಚಲನವಲನವನ್ನು ಗಮನಿಸಿ ಅವುಗಳಿಗೆ ಆಹಾರ ಆಮಿಷವೊಡ್ಡಿ ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕೆಲಸ ಮಾಡಿದರು.

500 ತಂಡ ನಿಯೋಜನೆ
ಚಂಡಮಾರುತದಿಂದಾಗಿ ಸುರಿಯುವ ಭಾರಿ ಮಳೆಗೆ ಉಂಟಾಗುವ ಪ್ರವಾಹದಿಂದಾಗುವ ಪ್ರಾಣಹಾನಿಯನ್ನು ತಪ್ಪಿಸಲು ಮತ್ತು ಅಗತ್ಯ ಸಮಯದಲ್ಲಿ ತಕ್ಷಣವೇ ನೆರವಾಗಲು 18 ಎನ್‌​ಡಿ​ಆ​ರ್‌​ಎಫ್‌ ತಂಡಗಳು, 12 ಎಸ್‌​ಡಿ​ಆ​ರ್‌​ಎಫ್‌, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರದ ತಂಡ​ಗಳು, ವಿದ್ಯುತ್‌ ಇಲಾಖೆಯ 400 ತಂಡ ನಿಯೋಜಿಸಲಾಗಿತ್ತು. ಜೊತೆಗೆ ಸೇನೆ, ನೌಕಾಪಡೆ, ವಾಯಪಡೆ, ಕರಾವಳಿ ಪಡೆ ಕೂಡಾ ನಿಯೋಜನೆಗೊಂಡಿದ್ದವು.

ಬೃಹತ್‌ ಹಡಗುಗಳು ಸ್ಥಳಾಂತರ
ಗುಜರಾತ್‌ ತೀರದ ಬಂದರುಗಳಲ್ಲಿ ನಿಲ್ಲಿಸಲಾಗಿದ್ದ ಬೃಹತ್‌ ಹಡಗುಗಳನ್ನು ಚಂಡಮಾರುತ ಸೂಚನೆ ಬೆನ್ನಲ್ಲೇ ಸ್ಥಳಾಂತರಿಸಲಾಗಿತ್ತು. ಈ ಹಡಗುಗಳು ಹಾನಿಗೊಳಗಾದರೆ ಭಾರಿ ಪ್ರಮಾಣದ ನಷ್ಟಸಂಭವಿಸುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬೃಹತ್‌ ಹಡಗುಗಳನ್ನು ಮಹಾರಾಷ್ಟ್ರದ ಬಂದರುಗಳಲ್ಲಿ ಲಂಗರು ಹಾಕಲು ಈ ಮೊದಲೇ ಅನುಮತಿ ಪಡೆದುಕೊಳ್ಳಲಾಗಿತ್ತು.

707 ಮಕ್ಕಳ ಜನನ
ಚಂಡಮಾರುತದ ಹಿನ್ನೆಲೆಯಲ್ಲಿ 7 ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದ 1171 ಗರ್ಭಿಣಿಯರ ಪೈಕಿ 1152 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈ ಪೈಕಿ 707 ಮಹಿಳೆಯರು ಕಳೆದ 2 ದಿನಗಳ ವ್ಯಾಪ್ತಿಯಲ್ಲಿ ಮಕ್ಕಳನ್ನು ಹೆತ್ತಿದ್ದಾರೆ. ಗರ್ಭಿಣಿಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಬೃಹತ್‌ ಹಡಗುಗಳು ಸ್ಥಳಾಂತರ
ಗುಜರಾತ್‌ ತೀರದ ಬಂದರುಗಳಲ್ಲಿ ನಿಲ್ಲಿಸಲಾಗಿದ್ದ ಬೃಹತ್‌ ಹಡಗುಗಳನ್ನು ಚಂಡಮಾರುತ ಸೂಚನೆ ಬೆನ್ನಲ್ಲೇ ಸ್ಥಳಾಂತರಿಸಲಾಗಿತ್ತು. ಈ ಹಡಗುಗಳು ಹಾನಿಗೊಳಗಾದರೆ ಭಾರಿ ಪ್ರಮಾಣದ ನಷ್ಟಸಂಭವಿಸುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬೃಹತ್‌ ಹಡಗುಗಳನ್ನು ಮಹಾರಾಷ್ಟ್ರದ ಬಂದರುಗಳಲ್ಲಿ ಲಂಗರು ಹಾಕಲು ಈ ಮೊದಲೇ ಅನುಮತಿ ಪಡೆದುಕೊಳ್ಳಲಾಗಿತ್ತು.

Latest Videos

click me!