ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಬುಧವಾರ, ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಮಾಡುವುದನ್ನು ತಡೆಯಲು ಪಾಕಿಸ್ತಾನವನ್ನು ಮತ್ತೆ ಎಫ್‌ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಬೂದು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ಅವರು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷೀಯ ಭಾರತೀಯ ನಿಯೋಗದ ಭಾಗವಾಗಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿ, ಭಾರತದಲ್ಲಿ ಅಸ್ಥಿರತೆ ಉಂಟುಮಾಡಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪಾಕಿಸ್ತಾನವನ್ನು ಎಫ್‌ಎಟಿಎಫ್ ಬೂದು ಪಟ್ಟಿಗೆ ಮತ್ತೆ ಸೇರಿಸಬೇಕಾಗಿದ್ದು, ಅಂದೇ ಮಾತ್ರ ನಾವು ಆ ಭಯೋತ್ಪಾದಕ ಗುಂಪುಗಳ ಹಣಕಾಸು ಮೂಲಗಳನ್ನು ನಿಯಂತ್ರಿಸಬಹುದು" ಎಂದು ಅವರು ಹೇಳಿದರು. ಅಮೆರಿಕದಿಂದ ಗುರುತಿಸಲ್ಪಟ್ಟ ಭಯೋತ್ಪಾದಕ ಮೊಹಮ್ಮದ್ ಎಹ್ಸಾನ್ ಜೊತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಕೈ ಕುಲಿಯುತ್ತಿರುವ ಛಾಯಾಚಿತ್ರವೊಂದನ್ನು ಉಲ್ಲೇಖಿಸಿದ ಓವೈಸಿ, "ಈ ಫೋಟೋವು ಪಾಕಿಸ್ತಾನ ಮತ್ತು ಭಯೋತ್ಪಾದಕರ ನಡುವಿನ ನೇರ ಸಂಪರ್ಕಕ್ಕೆ ಸ್ಪಷ್ಟ ಪುರಾವೆಯಾಗಿದೆ. ಪಾಕಿಸ್ತಾನದಲ್ಲಿ ಈ ಸಂಘಟನೆಗಳು ಬೆಳೆಯುತ್ತಿವೆ, ಅವರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೇ, ಭಾರತದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳನ್ನು ಉಂಟುಮಾಡಿ ದೇಶವನ್ನು ಅಸ್ಥಿರಗೊಳಿಸುವ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ" ಎಂದು ಹೇಳಿದರು.