ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ, ಉದ್ಯಮಿ ಕಿಡ್ನಾಪ್, ಕರ್ನಾಟಕದ ದೇಗುಲವೊಂದಕ್ಕೆ ಲಿಂಕ್!

Published : Jan 25, 2026, 04:07 PM IST

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ಅಪಹರಿಸಿ ಹಣ ದೋಚಲಾಗಿದ್ದು, ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಐವರನ್ನು ಬಂಧಿಸಲಾಗಿದೆ.

PREV
17
ಮಹಾರಾಷ್ಟ್ರ ಪೊಲೀಸರಿಂದ ಬೆಳಗಾವಿಗೆ ಪತ್ರ

ಬೆಳಗಾವಿ: ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದಿರುವ ಭಾರೀ ಮೊತ್ತದ ಹಣದ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಸುಮಾರು 400 ಕೋಟಿ ರೂ. ಮೌಲ್ಯದ ನಗದು ದರೋಡೆ ನಡೆದಿದ್ದು, ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಕರ್ನಾಟಕ ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನವರಿ 6ರಂದು ಬೆಳಗಾವಿ ಪೊಲೀಸರಿಗೆ ಪತ್ರ ಬರೆದಿದ್ದು, ಈ ಪತ್ರದ ಮೂಲಕವೇ ಈ ಭಾರೀ ಪ್ರಕರಣ ಬಹಿರಂಗಗೊಂಡಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಜಾರಾಮನ್ ತಿಳಿಸಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವಂತೆ, ಈ ಘಟನೆ 2025ರ ಅಕ್ಟೋಬರ್ 16ರಂದು ನಡೆದಿದೆ. ಗೋವಾದಿಂದ ಕರ್ನಾಟಕ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಎರಡು ಕಂಟೇನರ್‌ಗಳನ್ನು ಅಪಹರಿಸಿ, ಅದರಲ್ಲಿದ್ದ ಬರೋಬ್ಬರಿ 400 ಕೋಟಿ ಅಪಾರ ಮೊತ್ತದ ಹಣವನ್ನು ದರೋಡೆ ಮಾಡಲಾಗಿದೆ.

27
ನಾಸಿಕ್‌ನಲ್ಲಿ ಅಪಹರಣ ಪ್ರಕರಣವೂ ಜೋಡಣೆ

ಈ ದರೋಡೆ ಪ್ರಕರಣದ ಮುಂದುವರಿದ ಭಾಗವಾಗಿ, ಅಕ್ಟೋಬರ್ 22ರಂದು ನಾಸಿಕ್‌ನಲ್ಲಿ ಸಂದೀಪ್ ಪಾಟೀಲ್ ಎಂಬ ಯುವಕನನ್ನು ಅಪಹರಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಪಹರಣದ ವೇಳೆ ಅವರನ್ನು ಕ್ರೂರವಾಗಿ ಥಳಿಸಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವೂ ಇದೆ. ಸಂದೀಪ್ ಪಾಟೀಲ್ ನೀಡಿದ ದೂರಿನ ಆಧಾರದಲ್ಲೇ, ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಈ ಹಣವು ಮುಂಬೈ–ಥಾಣೆ ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದೆ ಎಂಬ ಮಾಹಿತಿ ಕೂಡ ಹೊರಬಂದಿದೆ.

37
ಇಷ್ಟು ದೊಡ್ಡ ದರೋಡೆ, ಆದರೆ ತಡವಾದ ಬಹಿರಂಗ

ಸುಮಾರು 400 ಕೋಟಿ ರೂ.ಗಳಷ್ಟು ಭಾರೀ ಮೊತ್ತದ ಹಣದ ದರೋಡೆ ನಡೆದಿದ್ದರೂ, ಈ ಘಟನೆ ಇಷ್ಟು ದಿನಗಳವರೆಗೆ ಬಹಿರಂಗವಾಗದೆ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಖಾನಾಪುರ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಜೊತೆಗೆ, ಈ ಪ್ರಕರಣದ ಆಳವಾದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.

47
ಮೂರು ರಾಜ್ಯಗಳ ಸಮನ್ವಯ ತನಿಖೆ

ಚೋರ್ಲಾ ಘಾಟ್ ಪ್ರದೇಶವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಗಡಿಭಾಗವಾಗಿರುವುದರಿಂದ, ಈ ಪ್ರಕರಣಕ್ಕೆ ಮೂರು ರಾಜ್ಯಗಳ ಪೊಲೀಸರ ಸಹಕಾರ ಅಗತ್ಯವಾಗಿದೆ. ಮಹಾರಾಷ್ಟ್ರ ಪೊಲೀಸರು ನಡೆಸುತ್ತಿರುವ ತನಿಖೆಗೆ ಬೆಳಗಾವಿ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಎಸ್‌ಪಿ ರಾಜಾರಾಮನ್ ತಿಳಿಸಿದ್ದಾರೆ. ಇದೇ ವೇಳೆ, ಚೋರ್ಲಾ ಘಾಟ್ ಪ್ರದೇಶದಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಶೀಘ್ರದಲ್ಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

57
ನಾಸಿಕ್‌ನಲ್ಲಿ ಐದು ಆರೋಪಿಗಳ ಬಂಧನ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಗ್ರಾಮೀಣ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಯೇಶ್ ಕದಮ್, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಟ್ ಗಾಂಧಿ. ಜನಾರ್ದನ್ ಧಾಯಗುಡೆ (ಮುಂಬೈ) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ವಿರಾಟ್ ಗಾಂಧಿಯನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ನ್ಯಾಯಸಮ್ಮತ ಹಾಗೂ ಸ್ವತಂತ್ರ ತನಿಖೆಗಾಗಿ ಎಸ್‌ಐಟಿ ನೇಮಕ ಮಾಡಲಾಗಿದೆ ಎಂದು ನಾಸಿಕ್ ಗ್ರಾಮೀಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಮಿರ್ಖೇಲ್ಕರ್ ಮಾಹಿತಿ ನೀಡಿದ್ದಾರೆ.

67
ನಕಲಿ ಖಾತೆ, ಹಳೆಯ 2,000 ರೂ. ನೋಟುಗಳ ಶಂಕೆ

ಪೊಲೀಸ್ ತನಿಖೆಯ ಪ್ರಕಾರ, ಗೋವಾದಿಂದ ಕರ್ನಾಟಕದ ದೇವಸ್ಥಾನಕ್ಕೆ ಸಾಗಿಸಲಾಗುತ್ತಿದ್ದ ಕಂಟೇನರ್‌ನಲ್ಲಿ ಹಳೆಯ 2,000 ರೂ. ನೋಟುಗಳಿಂದ ತುಂಬಿದ ಸುಮಾರು 400 ಕೋಟಿ ರೂ. ನಗದು ಇತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಣಕ್ಕೆ ಸಂಬಂಧಿಸಿದಂತೆ ನಕಲಿ ಖಾತೆಗಳನ್ನು ಸೃಷ್ಟಿಸಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆ ಸುಮಾರು ಒಂದೂವರೆ ರಿಂದ ಎರಡು ತಿಂಗಳ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಪೊಲೀಸರು ಸಮನ್ವಯದೊಂದಿಗೆ ತನಿಖೆ ನಡೆಸುತ್ತಿದ್ದಾರೆ.

77
ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

ಈ ಭಾರೀ ದರೋಡೆ ಪ್ರಕರಣದ ಕುರಿತು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, “ಮಹಾರಾಷ್ಟ್ರ ಪೊಲೀಸರು ನಮ್ಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಅದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೇಳಿದ್ದೇನೆ. ಸಂಪೂರ್ಣ ಮಾಹಿತಿ ಬಂದ ನಂತರ ಕರ್ನಾಟಕ ಪೊಲೀಸರ ಪಾತ್ರ ಎಷ್ಟಿರಬೇಕು ಎಂಬುದನ್ನು ಪರಿಶೀಲಿಸಲಾಗುತ್ತದೆ. ಮುಂದಿನ ತನಿಖೆಗೆ ಮಹಾರಾಷ್ಟ್ರ ಪೊಲೀಸರು ನಮ್ಮ ಸಹಕಾರವನ್ನು ಕೇಳಿದ್ದಾರೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ದೊಡ್ಡ ಹೆಸರುಗಳು ಬಹಿರಂಗವಾಗುವ ಸಾಧ್ಯತೆ

ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ದೊಡ್ಡ ರಾಜಕೀಯ ಮತ್ತು ಆರ್ಥಿಕ ಸಂಪರ್ಕಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಬಂಧಿತ ಆರೋಪಿಗಳ ವಿಚಾರಣೆಯ ವೇಳೆ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ನಿರೀಕ್ಷೆಯಿದ್ದು, ಈ ಭಾರೀ ಹಣದ ದರೋಡೆ ಪ್ರಕರಣ ರಾಜ್ಯಗಳ ನಡುವೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories