ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದ ರಾಜವಂಶವೊಂದಕ್ಕೆ ದೇವಾಲಯವು ಸೇರಿತ್ತು. ಸಂಗ್ರಾಮವೊಂದರಲ್ಲಿ ಅರಸೊತ್ತಿಗೆ ನಾಶವಾದಾಗ ದೇವಾಲಯವೂ ಅವನತಿ ಹೊಂದಿತ್ತು.
ಅನಾಥವಾಗಿ ಬಿದ್ದಿದ್ದ ವಿಗ್ರಹವನ್ನು ದನ ಕಾಯುತ್ತಿದ್ದ ಬಾಲಕರು ಈಗಿನ ಜಾಗಕ್ಕೆ ತಂದು ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ಗಣೇಶನ ವಿಗ್ರಹವನ್ನು ಇಟ್ಟು, ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವಾಗಿ ಇಟ್ಟು ಪೂಜಿಸುತ್ತಾ ಬಂದರು. ಅಂದಿನಿಂದ ಈ ಕ್ಷೇತ್ರವು ಸೌತಡ್ಕ ಎಂದು ಹೆಸರನ್ನು ಪಡೆಯಿತು ಎನ್ನುವ ಸ್ಥಳ ಪುರಾಣವಿದೆ.
ದೇವಸ್ಥಾನಗಳು ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಗೋಪುರ ಗರ್ಭಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿ ಪ್ರತಿಷ್ಠೆ ಮಾಡುವುದು ಸಂಪ್ರದಾಯ. ಆದರೆ ಸೌತಡ್ಕ ಗಣಪತಿ ಆಗ್ನೇಯಾಭಿಮುಖಿ.
ಕೆಲ ಸಮಯದ ಹಿಂದೆ ಭಕ್ತರು ಸೇರಿ ಜ್ಯೋತಿಷಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸ್ಸಿಲ್ಲವೆಂದೂ, ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೆ ಸಕಲ ಜೀವರಾಶಿಗಳಿಗೂ ಸ್ವ ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದ್ದೆಂದು ತಿಳಿದುಬಂದಿರುವುದರಿಂದ ಗುಡಿ ಕಟ್ಟುವ ಯೋಜನೆ ಅಲ್ಲಿಗೇ ಕೈಬಿಡಲಾಗಿದೆ. ಸರ್ವರಿಗೂ ಅಭಯ ಹಸ್ತನಾಗಿ ಸೌತಡ್ಕ ಗಣೇಶ ಹರಸುತ್ತಿದ್ದಾನೆ.
ದಾರಿ: ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಗೆ ತೆರಳಿ, ಅಲ್ಲಿಂದ ಮುಂದೆ ಗೋಳಿತೊಟ್ಟು ಎಂಬಲ್ಲಿ ಎಡಕ್ಕೆ ತಿರುಗಿ ಪಟ್ರಮೆ ರಸ್ತೆಯಲ್ಲಿ ಐದಾರು ಕಿ.ಮೀ. ಹೋಗುವಾಗ ಬಲಬದಿಗೆ ಕೊಕ್ಕಡಕ್ಕೆ ಹೋಗುವ ರಸ್ತೆ ಸಿಗುತ್ತದೆ.
ಈ ರಸ್ತೆಯಲ್ಲಿ ಮತ್ತೆ ಮೂರು ಕಿ.ಮೀ. ಸಾಗಿದರೆ ಎಡಬದಿಗೆ ದೇವಾಲಯ ಸಿಗುತ್ತದೆ.