ವೇದ ಸಿನಿಮಾದ ಫ್ರೀ ರಿಲೀಸ್ ಇವೆಂಟ್‌ಗೆ ಮಂಗಳೂರಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಇದಕ್ಕೂ ಮುನ್ನ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.
ಈ ಬಗ್ಗೆ ಮಾತನಾಡಿದ ಶಿವಣ್ಣ, 'ಕೊರಗಜ್ಜನ ಕ್ಷೇತ್ರದ ಬಗ್ಗೆ ನನಗೆ ರಕ್ಷಿತಾ ಅನೇಕ ಬಾರಿ ಹೇಳಿದ್ದರು. ಅಣ್ಣ ಕೊರಗಜ್ಜ ನ ಬಳಿಗೆ ಹೋಗಿ ಬನ್ನಿ ಅಂತ ಹೇಳಿದ್ದರು. ಹಾಗಾಗಿ ಇಲ್ಲಿಗೆ ಬಂದೆ,' ಎಂದರು. 'ಮನುಷ್ಯನ ಸಮಸ್ಯೆಯನ್ನ ಬಹಳ ಸರಳವಾಗಿ ಹೇಳುವ ರೀತಿ ಇದು.
ಯಾವುದೇ ಆಡಂಬರ ಇಲ್ಲದೇ ಜನರು ಪ್ರಾರ್ಥನೆ ಮಾಡಲು ಅವಕಾಶ ಇದೆ. ವೀಲ್ಯದೆಲೆ ಮತ್ತು ಶರಾಬು ಕೊಟ್ಟು ಪ್ರಾರ್ಥನೆ ಮಾಡುವ ಸರಳ ವಿಧಾನ ಇಲ್ಲಿಯದು. ಇಲ್ಲಿಗೆ ಬಂದು ಮನಸ್ಸಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಆಗೋದು ಬಿಡೋದು ದೈವದ ಇಚ್ಛೆ' ಎಂದು ಶಿವರಾಜ್‌ಕುಮಾರ್ ಹೇಳಿದರು.
ವೇದ ಚಿತ್ರದ ಪ್ರಮೋಷನ್‌ಗಾಗಿ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಮಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ಪಣಂಬೂರು ಕಡಲಕಿನಾರೆಯಲ್ಲಿ ನಡೆಯಲ್ಲಿ ವೇದ ಚಿತ್ರದ ಪ್ರಮೋಶನ್ ಡೆಯಲಿದೆ.
ಯಾರು ಈ ಕೊರಗಜ್ಜ?: ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರಿಯ ದೈವ. ಈ ಎರಡೂ ಜಿಲ್ಲೆಗಳಲ್ಲಿ ಬೆಲೆ ಬಾಳುವ ವಸ್ತುಗಳು ಕಳೆದು ಹೋದರೆ ಅಥವಾ ಆರೋಗ್ಯ ಸಮಸ್ಯೆ ಬಂದರೆ ಜನರು ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಬಹಳಷ್ಟು ಹರಕೆಗಳು ಈಡೇರಿರುವ ಉದಾಹರಣೆ ಇರುವುದರಿಂದ ಕೊರಗಜ್ಜ ಎಂದರೆ ಇಲ್ಲಿ ಸಖತ್ ಭಯ, ಭಕ್ತಿ.
ಕೊರಗಜ್ಜನ ಕತೆ: ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು. ಆತ 30 ದಿನಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಮತ್ತೆ ಕೆಲ ವರ್ಷಗಳಲ್ಲೇ ತಂದೆಯನ್ನೂ ಕಳೆದುಕೊಳ್ಳುತ್ತಾನೆ. ಅನಾಥ ಮಗು ಕೊರಗ ತನಿಯನನ್ನು ಒಬ್ಬ ಸೇಂದಿ ಮಾರುವ ಹೆಂಗಸು ಭೈರಕ್ಕೆ ಸಾಕುತ್ತಾಳೆ.
ಆಕೆ ಈತನನ್ನು ಸಾಕಿದ ಬಳಿಕ ಮನೆಯಲ್ಲಿ ಶ್ರೀಮಂತಿಕೆ ತುಂಬುತ್ತದೆ. ಈತ ಮುಂದೆ ತನ್ನ ಅಸಾಮಾನ್ಯ ಕೆಲಸಗಳಿಂದ ಪ್ರಸಿದ್ಧನಾಗುತ್ತಾನೆ. ಕಡೆಗೊಂದು ದಿನ ಹಣ್ಣು ಕೊಯ್ಯಲು ಹೋದವ ಮಾಯವಾಗುತ್ತಾನೆ ಎಂಬ ವಿವರ ತುಳು ಪಾಡ್ದನದಲ್ಲಿ ಬರುತ್ತದೆ. ನಂತರ ಈ ಕೊರಗಜ್ಜ ತನ್ನ ನೆಲದ ಜನರನ್ನು ಸದಾ ಕಾಯುವ ಭರವಸೆ ನೀಡಿದ.
ಅದಕ್ಕೆ ಪ್ರತಿಯಾಗಿ ಇಲ್ಲಿನ ಜನರೂ ಏಳು ಕಲ್ಲುಗಳಲ್ಲಿ ಕೊರಗಜ್ಜನನ್ನು ಪೂಜಿಸತೊಡಗಲಾರಂಭಿಸಿದರು. ಕೊರಗಜ್ಜ ಎಂದರೆ ಶಿವಾಂಶ ಸಂಭೂತ ಎಂಬ ನಂಬಿಕೆ ಇಲ್ಲಿಯದು. ಹಾಗಾಗಿ, ಕೊರಗಜ್ಜನಿಗೆ ಸೋಮವಾರದ ಪೂಜೆ ಹೆಚ್ಚು ವಿಶೇಷವಾಗಿದೆ.
ರಾತ್ರಿಯೂ ಬೆಳಕು ಹಾಕುವಂತಿಲ್ಲ!: ಮಂಗಳೂರಿನ ಅಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವಾಗ ಕೂಡಾ ವಾಹನಗಳು ಹೆಡ್‌ಲೈಡ್ ಹಾಕುವಂತಿಲ್ಲ. ಇಲ್ಲಿ ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂಬ ನಿಯಮವಿದೆ.
ಈ ಭಾಗದಲ್ಲಿ ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಹೆಡ್‌ಲೈಟ್‌ನ್ನು ಒಮ್ಮೆ ಡಿಮ್ ಡಿಪ್ ಮಾಡಿ ಹೋಗುತ್ತಾರೆ. ಇಲ್ಲಿ ರಾತ್ರಿ ಹೊತ್ತು ಮಹಿಳೆಯರಿಗೆ ಪ್ರವೇಶ ಇಲ್ಲ. ಅಜ್ಜನಿಗೆ ಹರಕೆಯ ರೂಪದಲ್ಲಿ ನೀಡುವ ಅಗೇಲು ಸೇವೆಯಲ್ಲಿ ಹುರುಳಿ ಹಾಗೂ ಬಸಳೆಯ ಸಾಂಬಾರು, ಮೀನು, ಕೋಳಿ, ಚಕ್ಕುಲಿ, ಸೇಂದಿ ಇತ್ಯಾದಿಗಳನ್ನು ಸೇವೆ ರೂಪದಲ್ಲಿ ನೀಡುತ್ತಾರೆ. ಹೆಚ್ಚಾಗಿ ಸೇಂದಿ ಮತ್ತು ಎಲೆಯಡಿಕೆ ಕೊರಗಜ್ಜನಿಗೆ ಕೊಡುವುದು ವಾಡಿಕೆ.
ಇಂದಿಗೂ ಕೊರಗಜ್ಜ ಈ ಭಾಗದಲ್ಲಿ ರಾತ್ರಿಯ ಹೊತ್ತು ಕುದುರೆಯ ಮೇಲೆ ಅಡ್ಡಾಡುತ್ತಾ ಜನರನ್ನು ಕಾಯುತ್ತಾನೆ ಎಂಬ ನಂಬಿಕೆ ಇದೆ. ಕೊರಗಜ್ಜನ ಕೋಲ ನೋಡಲು ಮಹಿಳೆಯರಿಗೆ ಪ್ರವೇಶವಿಲ್ಲ. ಕೊರಗಜ್ಜ ಭೂತದ ಪಾತ್ರಿಯೂ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶ್ರದ್ಧೆ ಭಕ್ತಿಯಿಂದ ನಂಬಿದವರಿಗೆ ಅಜ್ಜನ ಆರ್ಶಿವಾದ ಸದಾ ಇರುತ್ತದೆ.