ಸದ್ಗುರು ಜಗ್ಗಿ ವಾಸುದೇವ್ ಪ್ರೀತಿಯ ವಿಜಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು..

First Published Jan 25, 2024, 4:52 PM IST

ಸದ್ಗುರುಗೊಬ್ಬ ಪತ್ನಿ ಇದ್ದಳು, ಇವರಿಬ್ಬರದು ಪ್ರೇಮ ವಿವಾಹ, ಆದರೆ ಕೆಲವೇ ವರ್ಷಗಳಲ್ಲಿ ಆಕೆ ತೀರಿಹೋದರು. ಆದರೆ, ಇಂದಿಗೂ ಸದ್ಗುರು ಪತ್ನಿಯ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ.

ಹಾಲಿವುಡ್ ಸೂಪರ್‌ಸ್ಟಾರ್ ವಿಲ್‌ಸ್ಮಿತ್ ಹಾಗೂ ಫ್ಯಾಮಿಲಿಯನ್ನು ಭೇಟಿ ಮಾಡಿದ್ದಾರೆ ಸದ್ಗುರು

ಜಗದೀಶ್ ‘ಜಗ್ಗಿ’ ವಾಸುದೇವ್ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಆದರೆ, ಸದ್ಗುರು ಎಂದರೆ ಎಲ್ಲ ಪ್ರಶ್ನೆಗಳಿಗೂ ಉತ್ತರವಿಟ್ಟುಕೊಂಡ, ಲಾಜಿಕ್‌ ಇಟ್ಟು ಮಾತನಾಡುವ ಯೋಗಿ ಕಣ್ಣ ಮುಂದೆ ಬರುತ್ತಾರೆ. ಸದ್ಗುರು ಜಗ್ಗಿ ವಾಸುದೇವ್ ಅನೇಕ ಅದ್ಭುತಗಳ ವ್ಯಕ್ತಿ. ಅವರು ಆಧ್ಯಾತ್ಮಿಕ ಬೋಧಕರಾಗಿ, ಯೋಗಿಯಾಗಿ, ಕವಿಯಾಗಿ, ವಾಸ್ತುಶಿಲ್ಪಿ ಮತ್ತು ಬರಹಗಾರರಾಗಿ ಜಗತ್ಪ್ರಸಿದ್ಧರಾಗಿದ್ದಾರೆ. ಜೊತೆ ಜೊತೆಗೇ ರೇಸರ್‌ನಂತೆ ಬೈಕ್ ಓಡಿಸುತ್ತಾ, ಕ್ರಿಕೆಟ್ ಆಡುತ್ತಾ ಅಚ್ಚರಿ ಹುಟ್ಟಿಸುತ್ತಾರೆ. ಆದರೆ ಅವರೊಬ್ಬ ಪತಿಯೂ ಹೌದು, ಅವರಿಗೊಬ್ಬ ಮಗಳೂ ಇದ್ದಾಳೆ ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ.

ಪ್ರಸ್ತುತ ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲೆಸಿ ಇಶಾ ಫೌಂಡೇಶನ್ ನಡೆಸುತ್ತಿರುವ ಸದ್ಗುರು, ಸಮಸ್ಯೆಗಳಿಗೆ ಪರಿಹಾರ ಬಯಸಿ ಬರುವವರಿಗೆ ಆಧ್ಯಾತ್ಮಿಕ ಪ್ರಯಾಣದ ಮೂಲಕ ಸಾಗಲು ಸಹಾಯ ಮಾಡುತ್ತಾರೆ. ಇವರಿಗೊಬ್ಬ ಪತ್ನಿ ಇದ್ದಳು, ಇವರಿಬ್ಬರದು ಪ್ರೇಮ ವಿವಾಹ, ಆದರೆ ಕೆಲವೇ ವರ್ಷಗಳಲ್ಲಿ ಆಕೆ ತೀರಿಹೋದರು ಮತ್ತು ಅವರ ಕೊಲೆ ಆರೋಪ ಸದ್ಗುರು ಮೇಲೆ ಬಂದಿತ್ತು ಎಂಬುದು ಅಚ್ಚರಿ ಹುಟ್ಟಿಸಬಹುದು. 

ಹೌದು, ಸದ್ಗುರು ತಮ್ಮ ಪತ್ನಿ ವಿಜಯಕುಮಾರಿಯನ್ನು 1980ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ನಂತರ ಪತ್ರ ಬರೆದುಕೊಂಡಿದ್ದ ಅವರ ಪ್ರೇಮ 1984ರಲ್ಲಿ ಶಿವರಾತ್ರಿಯ ದಿನವೇ ಮದುವೆಗೆ ತಿರುಗಿತು. 

ಸದ್ಗುರುವಿನ ಪತ್ನಿ ಅವರ ಪ್ರೀತಿಯ ವಿಜ್ಜಿ, 1990ರಲ್ಲಿ ಹೆಣ್ಣು ಮಗು ರಾಧೆಗೆ ಜನ್ಮ ನೀಡಿದರು. ಆದರೆ, ದುಃಖದ ವಿಚಾರ ಎಂದರೆ ವಿಜಯಕುಮಾರಿ 1996ರಲ್ಲಿ, ತಮ್ಮ 33ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಈ ಬಗ್ಗೆ ಸದ್ಗುರು ವಿವರಿಸುವುದು ಹೀಗೆ; 1996ರ ಜುಲೈ ತಿಂಗಳಿನಲ್ಲಿ ನಾವು ಧ್ಯಾನಲಿಂಗವನ್ನು ಪ್ರತಿಷ್ಠಾಪಿಸುತ್ತಿದ್ದೆವು. ವಿಜ್ಜಿ ಲಿಂಗವು ಪೂರ್ಣಗೊಂಡ ನಂತರ, ಒಂದು ನಿರ್ದಿಷ್ಟ ಹುಣ್ಣಿಮೆಯ ದಿನ ಅವಳು ತನ್ನ ದೇಹವನ್ನು ಬಿಡುವುದಾಗಿ ನಿರ್ಧರಿಸಿದ್ದಳು. ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಇದು ಈಗ ಅಗತ್ಯವಿಲ್ಲ, ಸ್ವಲ್ಪ ಸಮಯ ಕಾಯಿ ಎಂದೆ. ಇದೀಗ, ನನ್ನ ಜೀವನವು ನನ್ನೊಳಗೆ ಮತ್ತು ನನ್ನ ಹೊರಗೆ ಪರಿಪೂರ್ಣವಾಗಿದೆ. ಇದೇ ನನಗೆ ಸಮಯ ಎಂದಳು.  

ಆ ಹುಣ್ಣಿಮೆಯ ದಿನ, ಅವಳು ಜನರ ಗುಂಪಿನೊಂದಿಗೆ ಕುಳಿತು ಧ್ಯಾನ ಮಾಡುತ್ತಿದ್ದಳು. ಎಂಟು ನಿಮಿಷಗಳ ನಂತರ, ಅವಳು ಯಾವುದೇ ಪ್ರಯತ್ನವಿಲ್ಲದೆ ಮತ್ತು ಅವಳ ಮುಖದಲ್ಲಿ ದೊಡ್ಡ ನಗುವಿನೊಂದಿಗೆ ಹೊರಟುಹೋದಳು. ಅವಳು ತನ್ನ ಆರೋಗ್ಯದ ಉತ್ತುಂಗದಲ್ಲಿದ್ದಳು, ಕೇವಲ ಮೂವತ್ಮೂರು ವರ್ಷ ವಯಸ್ಸಿನವಳು ಎನ್ನುತ್ತಾರೆ ಸದ್ಗುರು.

ಆದರೆ, ಆಕೆಯ ಸಾವು ಆರು ತಿಂಗಳ ನಂತರ ವಿವಾದಾತ್ಮಕ ವಿಷಯವಾಯಿತು. ಆಕೆಯ ತಂದೆ ಕೊಯಮತ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಲ್ಲಿಸಿ, ಸದ್ಗುರು ತನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಕೆಯ ಶವಸಂಸ್ಕಾರ ವೇಗವಾಗಿ ನಡೆದಿದ್ದನ್ನು ಕಾರಣ ನೀಡಿದರು. ಪೊಲೀಸರು ತಮ್ಮ ತನಿಖೆಯನ್ನು ಪ್ರಾರಂಭಿಸಿದರು.

ವೈದ್ಯರು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಪೊಲೀಸರು ಆಕೆಯ ಕೆಲವು ಚಿತಾಭಸ್ಮ ಮತ್ತು ಮೂಳೆಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದರು. ಆಗಲೂ ಅದು ಅಸಹಜ ಸಾವು ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಗಲಿಲ್ಲ.

ನಂತರ, 8 ಜನವರಿ 1999 ರಂದು, ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಕರಣವನ್ನು ಕೈಬಿಟ್ಟಿತು. ಇಂದು ಸದ್ಗುರು ಪುತ್ರಿ ರಾಧೆ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ಸಂದೀಪ್ ನಾರಾಯಣನ್ ಅವರನ್ನು ವಿವಾಹವಾಗಿದ್ದಾರೆ. 

click me!