ಉಡುಪಿ ಅಂದರೆ ಕೃಷ್ಣಮಠ, ಕೃಷ್ಣಮಠವೆಂದರೆ ಅಷ್ಟಮಿ, ಅಷ್ಟಮಿ ಅಂದರೆ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು. ಹೀಗೊಂದು ಭಾವನೆ ಮೂಡುವುದಕ್ಕೆ ಕಾರಣವೂ ಇದೆ, ವಿಟ್ಲಪಿಂಡಿ ಆಚರಣೆಗೆ ಹೊಸ ಆಯಾಮ ಕೊಟ್ಟವರು ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮಿವರ ತೀರ್ಥ ಸ್ಚಾಮಿಗಳು. ಅಷ್ಟಮಿಯ ದಿನ ಆರ್ಘ್ಯ ಪ್ರದಾನ ಮುಗಿದ ನಂತರ, ಶ್ರೀ ಕೃಷ್ಣ ಲೀಲೋತ್ಸವದ ಸಂಭ್ರಮ ರಥ ಬೀದಿಯನ್ನು ಆವರಿಸಿಬಿಡುತ್ತದೆ. ಅನೇಕ ಮಂದಿ ಉಪವಾಸ, ಪೂಜೆ ಪುನಸ್ಕಾರಗಳ ಮೂಲಕ ಕೃಷ್ಣ ನ ಆರಾಧನೆ ಮಾಡಿದರೆ, ಕಲಾರಾಧನೆಯ ಮೂಲಕ ಕೃಷ್ಣನ ಪೂಜೆ ಮಾಡುವವರು ಸಾವಿರಾರು ಮಂದಿ. ಹರಕೆ ಹೊತ್ತು ವೇಷ ಧರಿಸಿ ಕೃಷ್ಣ ನ ಸೇವೆ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ.