ರಾಜ್ಯದಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ವಿಜೃಂಭಣೆಯಿಂದ ಹೆಣ್ಣು ದೇವರಿಗೆ ವಿಶೇಷ ಅಲಂಕಾರದ ಮಾಡಿ ಪೂಜೆಗಳನ್ನು ಮಾಡಲಾಗುತ್ತಿದೆ. ಆದರೆ, ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಳಂಕಾರ ಮಾಡಲಾಗಿದೆ.
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ. ಬರೋಬ್ಬರಿ 3 ಲಕ್ಷ ರೂ. ಮೌಲ್ಯದ ನೋಟುಗಳಿಂದ ಈ ಅಲಂಕಾರ ಮಾಡಲಾಗಿದೆ. ಈ ವಿಶೇಷ ಅಲಂಕಾರವನ್ನು ನೋಡಲು ಭಕ್ತರು ಮುಗಿಬಿದ್ದಿದ್ದಾರೆ.
ಪೂಜಾ ಕೈಂಕರ್ಯಗಳನ್ನು ನಡೆಸುವ ಕಾರ್ಯಕ್ರಮಗಳ ಬ್ಯಾಕ್‌ಗ್ರೌಂಡ್ ಡಿಸೈನ್ ಮಾಡುವುದಕ್ಕೆ ಪ್ರಸಿದ್ಧಿಯನ್ನು ಪಡೆದ ಅರ್ಚಕ ಲಕ್ಷ್ಮೀಶ್ ಶರ್ಮಾ ನೇತೃತ್ವದಲ್ಲಿ ಚಾಮುಂಡೇಶ್ವರಿ ದೇವಿಗೆ ಅಲಂಕಾರ ಮಾಡಿ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಗಿದೆ.
ಚಾಮುಂಡೇಶ್ವರಿ ದೇವಿಯ ಗರ್ಭಗುಡಿ ದ್ವಾರ ಬಾಗಿಲಿಗೆ ನೋಟಿನ ಹೊದಿಕೆಯನ್ನು ನಿರ್ಮಿಸಲಾಗಿದೆ. ಜೊತೆಗೆ, ದೇವಿಯ ವಿಗ್ರಹದಿಂದ ಗರ್ಭಗುಡಿಯ ಹೊಸ್ತಿಲಿನವರೆಗೂ ನೋಟಿನ ಹಾಸಿಗೆಯನ್ನು ನಿರ್ಮಾಣ ಮಾಡಲಾಗಿದೆ.
ಚಾಮುಂಡೇಶ್ವರಿ ದೇವಿಯ ಹಿಂಭಾಗದಲ್ಲಿ ವೃತ್ತಾಕಾರವಾಗಿ 10 ರೂ., 20 ರೂ., 50 ರೂ., 100 ರೂ., 200 ರೂ. ಹಾಗೂ 500 ರೂ. ನೋಟುಗಳನ್ನು ಬಳಕೆ ಮಾಡಿ ಅಲಂಕಾರ ಮಾಡಲಾಗಿದೆ. ಈ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಕೂಡ ಸಾಲುವುದಿಲ್ಲ.
ಇನ್ನು ದೇವರಿಗೆ ಅಲಂಕಾರ ಮಾಡುವುದಕ್ಕೆ ಅಗತ್ಯವಿದ್ದ 3 ಲಕ್ಷ ರೂ. ಹಣವನ್ನು ಪೂರ್ಣವಾಗಿ ಭಕ್ತರಿಂದಲೇ ಸಂಗ್ರಹಣೆ ಮಾಡಲಾಗಿದೆ. 10 ರೂ. ನೋಟುಗಳಿಂದ 500 ರೂ. ಮುಖಬೆಲೆಯ ನೋಟುಗಳವೆರೆಗ ವಿವಿಧ ಬಣ್ಣಗಳನ್ನು ಹೊಂದಿದ ನೋಟುಗಳು ಇರುವುದರಿಂದ ದೇವಿ ಅಲಂಕಾರವೂ ಕೂಡ ವಿಭಿನ್ನ ಬಣ್ಣಗಳಿಂದ ಮಿಂಚುತ್ತಿದೆ.
ಪ್ರತಿನಿತ್ಯ ಚಾಮುಂಡೇಶ್ವರಿ ದೇವಿಯಾಗಿ ಪೂಜಿಸಲ್ಪಡುತ್ತಿದ್ದ ದೇವಿಗೆ ಇಂದು ಧನಲಕ್ಷ್ಮಿ ರೂಪದಲ್ಲಿ ಅಲಂಕಾರ ಮಾಡಲಾಗಿದ್ದು, ಭಕ್ತರು ದೇವರ ಅಲಂಕಾರವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಇನ್ನು ಈ ತರಹದ ಅಲಂಕಾರ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.