ಗುರುಗಳಾದ ಮಕ್ಕಳು: 46ನೇ ವಯಸ್ಸಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ತಾಯಿ..!

First Published | Aug 11, 2021, 8:22 AM IST

ಶಿವಾನಂದ ಗೊಂಬಿ 

ಹುಬ್ಬಳ್ಳಿ(ಆ.11): ತಾಯಿ ಮೊದಲ ಗುರು ಎಂಬ ಮಾತಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮಕ್ಕಳು ದೊಡ್ಡವರಾದ ಮೇಲೆ ತಾವೇ ಗುರುವಾಗಿ ತಾಯಿಗೆ ಕಲಿಸಿ ಎಸ್ಸೆಸ್ಸೆಲ್ಸಿ ಪಾಸು ಮಾಡಿಸುವ ಮೂಲಕ ಆಕೆಯ ಕನಸು ನನಸಾಗಿಸಿದ್ದಾರೆ. ಇದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಿ ಶ್ರೇಣಿಯಲ್ಲಿ ಪಾಸಾದ ಕಲಘಟಗಿ ತಾಲೂಕಿನ ಮಿಶ್ರೀಕೋಟೆ ಗ್ರಾಮದ ಮಹಾದೇವಿ ನಾಯ್ಕರ ಕಥೆ.
 

ಮಹಾದೇವಿ ನಾಯ್ಕರ ಅವರಿಗೀಗ 46 ವರ್ಷ. ಮನೆಯಲ್ಲಿನ ಕಡುಬಡತನದಿಂದಾಗಿ 2ನೇ ತರಗತಿಗೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋದವರು. ಮಕ್ಕಳು ವಿದ್ಯಾವಂತರು. ತಾನೂ ಕನಿಷ್ಠ ಪಕ್ಷ ಎಸ್ಸೆಸ್ಸೆಲ್ಸಿಯಾದರೂ ಓದಬೇಕಿತ್ತು ಎಂಬ ತನ್ನ ಆಸೆಯನ್ನು ಮಕ್ಕಳು ಮುಂದೆ ಹೇಳಿಕೊಂಡಿದ್ದಾರೆ. ಅದಕ್ಕೆ ಮಕ್ಕಳಿಬ್ಬರು, ತಾಯಿಯನ್ನು ಹುರಿದುಂಬಿಸಿದ್ದಾರೆ. ಮಕ್ಕಳೇ ಕುಳಿತು ಪ್ರತಿನಿತ್ಯ ಎರಡ್ಮೂರು ಗಂಟೆ ತಾಯಿಯೊಂದಿಗೆ ಕುಳಿತು ‘ಎಬಿಸಿಡಿ’ಯಿಂದ ಕಲಿಸಿದ್ದಾರೆ.

ಬಳಿಕ ಮಿಶ್ರೀಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯ ಆಗಿ ಕೆಲಸ ಮಾಡುತ್ತಾ ಮಕ್ಕಳನ್ನು ಓದಿಸಿದರು. ದೊಡ್ಡ ಮಗ ವೀರೇಶ ಎಂಎ ಮುಗಿಸಿ, ಬಿಇಡಿ ಓದುತ್ತಿದ್ದರೆ, ಸಣ್ಣ ಮಗ ರವಿ ಬಿಕಾಂ ಓದಿ ಇದೀಗ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿದ್ದಾನೆ.

Tap to resize

2-3 ತಿಂಗಳು ಎಸ್ಸೆಸ್ಸೆಲ್ಸಿ ಪಠ್ಯಕ್ರಮದಲ್ಲಿನ ಪಾಠ ಹೇಳಿಕೊಟ್ಟಿದ್ದಾರೆ. ಕಳೆದ ತಿಂಗಳು ನಡೆದ ಪರೀಕ್ಷೆಗೆ ಕುಳಿತು ಪರೀಕ್ಷೆ ಬರೆದಿದ್ದಾರೆ. 625 ಅಂಕಗಳಿಗೆ 230 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ ಮಹಾದೇವಿ. ಮಾರ್ಕ್ಸ್‌ ಎಷ್ಟು ಬಿದ್ದಿದೆ ಎಂಬುದು ಮುಖ್ಯವಲ್ಲ. ಎಸ್ಸೆಸ್ಸೆಲ್ಸಿ ಪಾಸಾಗಿದೆಯೆಲ್ಲ ಅಷ್ಟು ಸಾಕು ಎಂದು ಮಕ್ಕಳು, ತಾಯಿ ಇಬ್ಬರು ಖುಷಿ ಪಟ್ಟಿದ್ದಾರೆ.

ಒಟ್ಟಿನಲ್ಲಿ ಮಕ್ಕಳೇ ಗುರುವಾಗಿ ತಾಯಿಯನ್ನು ಎಸ್ಸೆಸ್ಸೆಲ್ಸಿ ಪಾಸು ಮಾಡಿಸಿದ್ದು, ಇದೀಗ ಪಿಯುಸಿ ಪರೀಕ್ಷೆಯನ್ನೂ ಕುಳಿತುಕೊಳ್ಳಬೇಕೆಂಬ ಆಸೆ ಮಹಾದೇವಿದ್ದು. ಅದರಲ್ಲೂ ಯಶಸ್ವಿಯಾಗಲಿ ಎಂಬುದು ಗ್ರಾಮಸ್ಥರ ಆಶಯ.

Latest Videos

click me!