
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ಪರೀಕ್ಷೆ ರದ್ದಾದ ದಿನದಿಂದ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಆತ್ಮ*ಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಆಘಾತಕಾರಿ ಘಟನೆ ನಡೆಯುತ್ತಿದೆ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಈ ಘಟನೆ ಆತ್ಮ*ಹತ್ಯೆ ಅಲ್ಲ ಇದು ವ್ಯವಸ್ಥೆಯ ಕೊಲೆ ಎಂದು ಕಿಡಿಕಾರಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ 21 ವರ್ಷದ ರಿತಿಕ್ ಮಿಶ್ರಾ ಆತ್ಮ*ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಇನ್ನು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲ ಎಂಬುದು ರಿತಿಕ್ ಅವರ ಕೊನೆಯ ಮಾತುಗಳಾಗಿದ್ದವು. ಮೂರನೇ ಬಾರಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ಈ ಯುವಕ, ಪರೀಕ್ಷೆ ರದ್ದಾದ ಬಳಿಕ ತೀವ್ರ ಮನನೊಂದು ಖಿನ್ನತೆಗೆ ಒಳಗಾಗಿದ್ದನು. ಗೋವಾದಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದೆ. ಈ ಯುವಕರು ಪರೀಕ್ಷೆಯಲ್ಲಿ ಸೋತಿಲ್ಲ. ಅವರನ್ನು ಭ್ರಷ್ಟ ವ್ಯವಸ್ಥೆಯೇ ಕೊಂದಿದೆ. ಇದು ಆತ್ಮ*ಹತ್ಯೆಯಲ್ಲ – ಇದು ವ್ಯವಸ್ಥೆಯ ಕೊಲೆ, ಎಂದು ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪರೀಕ್ಷಾ ಹಗರಣಗಳ ಬಗ್ಗೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
2015ರಿಂದ 2026ರವರೆಗೆ ಒಟ್ಟು 148 ಪರೀಕ್ಷಾ ಹಗರಣಗಳು ನಡೆದಿವೆ. 87 ಪರೀಕ್ಷೆಗಳು ರದ್ದಾಗಿದ್ದು, ಸುಮಾರು 9 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾನಿಗೊಳಗಾಗಿದೆ. ಈ 148 ಪ್ರಕರಣಗಳಲ್ಲಿ ಕೇವಲ ಒಂದೇ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಸಿಬಿಐ 17 ಪ್ರಕರಣಗಳನ್ನು, ಇಡಿ 11 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರೂ, ಯಾರಿಗೂ ಶಿಕ್ಷೆಯಾಗಿಲ್ಲ. ವಿಶೇಷವಾಗಿ NEET, AIPMT ಸೇರಿದಂತೆ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲೇ 15 ಹಗರಣಗಳು ನಡೆದಿವೆ ಎಂದು ರಾಹುಲ್ ಆರೋಪಿಸಿದರು.
ಇದಲ್ಲದೆ, ಯಾವುದೇ ಜವಾಬ್ದಾರಿಯುತ ಅಧಿಕಾರಿ ಅಥವಾ ಸಚಿವರು ರಾಜೀನಾಮೆ ನೀಡದಿರುವುದನ್ನು ಪ್ರಶ್ನಿಸಿದರು. ಅವರನ್ನು ಕೆಲಕಾಲಕ್ಕೆ ಸ್ಥಾನದಿಂದ ತೆಗೆದುಹಾಕಿ, ನಂತರ ಮರು ನೇಮಕ ಮಾಡಲಾಗುತ್ತಿದೆ. ಹಗರಣ ನಡೆಸುವವರಿಗೆ ಬಹುಮಾನ ಸಿಗುತ್ತಿದ್ದು, ಪರಿಶ್ರಮ ಪಡುವ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಉತ್ತರ ಪ್ರದೇಶದ ರಿತಿಕ್ ಮಿಶ್ರಾ ಗುರುವಾರ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಯಾವುದೇ ಆತ್ಮ*ಹತ್ಯೆ ಪತ್ರ ಪತ್ತೆಯಾಗದಿದ್ದರೂ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಪರೀಕ್ಷೆ ರದ್ದಾದ ನಂತರ ಅವರು ತೀವ್ರ ಒತ್ತಡದಲ್ಲಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಾರಿ ಉತ್ತಮ ಅಂಕಗಳನ್ನು ಗಳಿಸುವ ವಿಶ್ವಾಸ ರಿತಿಕ್ ಅವರಿಗೆ ಇತ್ತು ಎಂದು ಅವರ ತಂದೆ ಅನೂಪ್ ಮಿಶ್ರಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ರಾಜಸ್ಥಾನದ ಸಿಕಾರ್‌ನಲ್ಲಿ 22 ವರ್ಷದ ಪ್ರದೀಪ್ ಮಹಿಚ್ ಎಂಬ ವಿದ್ಯಾರ್ಥಿ ಕೂಡ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೂರನೇ ಪ್ರಯತ್ನದಲ್ಲಿ 650 ಅಂಕಗಳನ್ನು ನಿರೀಕ್ಷಿಸಿದ್ದ ಅವರು, ಪರೀಕ್ಷೆ ರದ್ದಾದ ಸುದ್ದಿ ಕೇಳಿ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಅವರು ತಮ್ಮ ಸಹೋದರಿಯ ಸ್ಕಾರ್ಫ್ ಬಳಸಿ ನೇಣು ಬಿಗಿದುಕೊಂಡಿದ್ದರೆ ಎಂದು ವರದಿ ತಿಳಿಸಿದೆ.
ಇನ್ನು ದೆಹಲಿಯ ಆಜಾದ್‌ಪುರದಲ್ಲಿಯೂ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಗೋವಾದ ಮಾರ್ಗೋವ್‌ನಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬನು ಶೈಕ್ಷಣಿಕ ಒತ್ತಡವನ್ನು ಉಲ್ಲೇಖಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.
ಪ್ರಶ್ನೆ ಪತ್ರಿಕೆ ಸೋರಿಯಾದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮೇ 3ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಈ ನಿರ್ಧಾರವು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿತ್ತು.
ಇನ್ನು ನೀಟ್ ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲು ತೀರ್ಮಾನಿಸಲಾಗೊದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ. ಜೊತೆಗೆ, ಮುಂದಿನ ವರ್ಷದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ ನಡೆಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಸಿಬಿಐ ತನಿಖೆಗೂ ಕೇಂದ್ರ ಸರ್ಕಾರ ಆದೇಶ ನೀಡಿದೆ.
ಒಟ್ಟಿನಲ್ಲಿ, ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲಿನ ಪ್ರಶ್ನೆಗಳು ಹಾಗೂ ಹಗರಣಗಳ ಸರಮಾಲೆ ಇವೆಲ್ಲವೂ ಶಿಕ್ಷಣ ವ್ಯವಸ್ಥೆಯ ಗಂಭೀರ ಸಂಕಷ್ಟವನ್ನು ಬಯಲಿಗೆಳೆಯುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಮುಂದಿನ ದೊಡ್ಡ ಸವಾಲಾಗಿ ಪರಿಣಮಿಸಿದೆ.