Karnataka Government School Timing Change: ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಶನಿವಾರದ ದಿನ ಬೆಳಗಿನ ಸಮಯ ಎಷ್ಟು? ತಿಳಿಯಿರಿ
ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ ಶಾಲೆ ಆರಂಭಿಸಿ ಮಧ್ಯಾಹ್ನ 12. 30ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಏಕರೂಪದ ಸಮಯ ನಿಗದಿಪಡಿಸಿದೆ. ಇದು ಜೂ.27ರ ಶನಿವಾರದಿಂದಲೇ ಜಾರಿಯಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
24
ಶನಿವಾರದ ಶಾಲಾ ಸಮಯ ಬದಲಾವಣೆ
ಪ್ರಸ್ತುತ ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಬೇರೆ ಶಾಲಾ ಸಮಯವನ್ನು ಪಾಲಿಸಲಾಗುತ್ತಿದೆ. ಕೆಲವೆಡೆ ಬೆಳಗ್ಗೆ 7.30ರಿಂದ 11.30, ಇನ್ನು ಕೆಲವೆಡೆ ಬೆಳಗ್ಗೆ 8ರಿಂದ 12 ಗಂಟೆ ಹೀಗೆ ಬೇರೆ ಬೇರೆ ಸಮಯ ಪಾಲನೆ ಆಗುತ್ತಿದೆ. ಇದರ ಬದಲು ವಿದ್ಯಾರ್ಥಿ ಹಾಗೂ ಶಿಕ್ಷಕ ಸ್ನೇಹಿಯಾಗಿ ರಾಜ್ಯಾದ್ಯಂತ ಒಂದೇ ಸಮಯ ನಿಗದಿಪಡಿಸಿ ಅದನ್ನು ಅನುಸರಿಸಲು ಸೂಚಿಸಲಾಗಿದೆ.
34
ಆನ್‌ಲೈನ್ ಹಾಜರಾತಿ ಕಾರಣ:
ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಕರ್ತವ್ಯ ಮೊಬೈಲ್ ಅಪ್ಲಿಕೇಷನ್ ಮೂಲಕ ಎಐ ಆಧಾರಿತ ಡಿಜಿಟಲ್ ಹಾಜರಾತಿ ಜಾರಿಗೊಳಿಸಿದೆ. ಈವರೆಗೆ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಅವರ ಹಾಜರಿ ದಾಖಲಾಗುತ್ತಿತ್ತು. ಶನಿವಾರ ಬಸ್ ಸಿಗದಿರುವುದು ಸೇರಿದಂತೆ ಬೇರೆ ಕಾರಣಗಳಿಂದ ಶಿಕ್ಷಕರು ತಡವಾಗಿ ಬಂದರೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈಗ ಒಂದು ನಿಮಿಷ ತಡವಾದರೂ ಗೈರು ಹಾಜರಾತಿ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸಾರಿಗೆಯನ್ನೇ ನಂಬಿರುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಹಾಗಾಗಿ ಶನಿವಾರ ಶಾಲಾ ಸಮಯ ಬದಲಾವಣೆ ಮಾಡಬೇಕೆಂಬ ಅಭಿಪ್ರಾಯ ಶಿಕ್ಷಕರ ವಲಯದಲ್ಲಿ ಕೇಳಿಬಂದಿತ್ತು. ಹಾಗಾಗಿ ಸಮಯ ತಿದ್ದುಪಡಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರತಿ ಶನಿವಾರಕ್ಕೆ ಮಾತ್ರ ಶಾಲಾ ಸಮಯವನ್ನು ಏಕರೂಪವಾಗಿ ಬದಲಾವಣೆ ಮಾಡಲಾಗಿದೆ. ಕರ್ತವ್ಯ ಅಪ್ಲಿಕೇಷನ್‌ನಲ್ಲೂ ಇದನ್ನು ಅಪ್‌ಡೇಟ್ ಮಾಡಲಾಗಿದೆ. ಜೂ.27ರಿಂದಲೇ ಇದು ಅನ್ವಯವಾಗಲಿದೆ.