ಪೋಷಕರಲ್ಲಿ ತಪ್ಪು ಕಲ್ಪನೆ!
ಮಕ್ಕಳ ಅಪಹರಣದ ವಿಷಯದಲ್ಲಿ ಬಹಳಷ್ಟು ಪೋಷಕರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಕಳ್ಳರು ಕೇವಲ ಶ್ರೀಮಂತರ ಮಕ್ಕಳನ್ನು ಮಾತ್ರ ಅಪಹರಿಸುತ್ತಾರೆ. ನಾವು ಶ್ರೀಮಂತರಲ್ಲ, ಸಾಕಷ್ಟು ಬ್ಯಾಂಕ್ ಇಲ್ಲ ಹೀಗಾಗಿ ನಮ್ಮ ಮಕ್ಕಳು ಸುರಕ್ಷಿತ ಎಂದು ನಂಬುತ್ತಾರೆ.ಇದು ತಪ್ಪು ಅಪಹರಣಕಾರರು ಸುಲಿಗೆಗಾಗಿ ಮಾತ್ರ ಅಪಹರಿಸುವುದಿಲ್ಲ. ತಮ್ಮ ವಿಕೃತ ಲೈಂಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಮಕ್ಕಳನ್ನು ಅಪಹರಿಸುವ ಸಾಕಷ್ಟು ಮನೋರೋಗಿಗಳಿದ್ದಾರೆ. ಅಂಥವರನ್ನು ಶಿಶುಕಾಮಿಗಳು ಎಂದು ಕರೆಯಲಾಗುತ್ತದೆ. ಇಂಥ ಶಿಶುಕಾಮಿಗಳು ನಿರಂತರವಾಗಿ ಮಕ್ಕಳಿಗಾಗಿ ಹುಡುಕುತ್ತಿರುತ್ತಾರೆ ಎಂಬುದು ಗಮನದಲ್ಲಿಟ್ಟುಕೊಳ್ಳಿ.
ದುಷ್ಕರ್ಮಿಗಳು ಸಭ್ಯರಂತೆ ಕಾಣುತ್ತಾರೆ:
ಕೆಟ್ಟ ವ್ಯಕ್ತಿಗಳು ಸಿನಿಮಾದಲ್ಲಿ ತೋರಿಸುವಂತೆ ದೈತ್ಯಾಕಾರವಾಗಿ ಕುರೂಪಿಯಾಗಿ ಕಾಣಬೇಕಿಲ್ಲ. ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಸಭ್ಯರಂತೆ ಕಾಣಬಹುದು. ನೋಡುವವರಿಗೆ ಹಿತವಾಗಿ ಆಕರ್ಷಿಸುವಂತೆ, ಇವರು ಒಳ್ಳೆಯವರು, ಕಳ್ಳರು ಅಲ್ಲ ಎಂಬಂತೆ ಕಾಣಬಹುದು. ಹೀಗಾಗಿ ಮಕ್ಕಳು ಅಪರಿಚಿತರ ಹಾಕಿರುವ ಬಟ್ಟೆ, ನೋಟದಿಂದ ಅವರನ್ನು ಒಳ್ಳೆಯವರೆಂದು ನಿರ್ಣಯಿಸಬಾರದು. ನಿಮ್ಮ ಮಕ್ಕಳು ಒಂಟಿಯಾಗಿದ್ದಾಗ, ಯಾರೇ ಕರೆದರೂ ಪರಿಚಯದವರೇ ಆಗಿದ್ದರೂ ಹತ್ತಿರಕ್ಕೆ ಹೋಗದಂತೆ ಮತ್ತು. ಇಂಥ ಘಟನೆಗಳು ನಡೆದಾಗ ಮನಗೆ ಬಂದು ತಿಳಿಸುವಂತೆ ಮಕ್ಕಳಿಗೆ ಕಲಿಸಬೇಕು. ಪರಿಚಿತರಿಂದಲೇ ಮಕ್ಕಳ ಅಪಹರಣಗಳು ನಡೆಯುವುದು ಹೆಚ್ಚು ಎಂಬುದು ತಿಳಿಸಿ.
ಅಪರಿಚಿತರಿಗೆ ಸಹಾಯ ಮಾಡುವಾಗ ಎಚ್ಚರ:
ಅಪರಿಚಿತರು ಯಾರಾದರೂ ಸಹಾಯ ಕೇಳಿಕೊಂಡು ಬಂದರೆ ನಿರಾಕರಿಸುವುದು ಸರಿ ಎಂದು ಮಕ್ಕಳಿಗೆ ಕಲಿಸಿ. ಯಾಕೆಂದರೆ ವಯಸ್ಕರಿಗೆ ಮಗುವಿನಿಂದ ಸಹಾಯ ಬೇಕು ಎಂಬುದಕ್ಕೆ ಯಾವ ಕಾರಣವೂ ಇಲ್ಲ ಎಂಬುದನ್ನ ಮಕ್ಕಳಿಗೆ ಮನವರಿಕೆ ಮಾಡಿಕೊಡಿ.ಶಿಶು ಕಾಮಿಗಳು ಕೆಲವೊಮ್ಮೆ ಸಹಾಯ ಮಾಡುವ ನೆಪದಲ್ಲಿ ಮಕ್ಕಳನ್ನು ಅಪಹರಣ ಮಾಡುತ್ತಾರೆ.ಅಪರಿಚಿತರಿಂದ ಎಂದಿಗೂ ಕ್ಯಾಂಡಿ, ಸಿಹಿತಿಂಡಿ ಅಥವಾ ಹಣವನ್ನು ಸ್ವೀಕರಿಸದಂತೆ ಮಕ್ಕಳಿಗೆ ಕಲಿಸಿ.
ನೆರೆಹೊರೆಯವರ ಬಗ್ಗೆ ಎಚ್ಚರಿಕೆ:
ಬಹಳಷ್ಟು ಪ್ರಕರಣಗಳಲ್ಲಿ ನೆರೆಹೊರೆಯವರಿಂದಲೇ ಮಕ್ಕಳ ಮೇಲೆ ಅತ್ಯಾಚಾರ, ಅಪಹರಣ ಘಟನೆಗಳು ಹೆಚ್ಚಿವೆ. ಹೀಗಾಗಿ ನಿಮ್ಮ ಅನುಮತಿ ಇಲ್ಲದೆ ಯಾರ ಮನೆಗೂ ಮಗು ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಬೇಕು. ಎಲ್ಲಾ ಸಮಯದಲ್ಲೂ ನಿಮ್ಮ ಮಗು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಒಂದು ಸಿಸ್ಟಮ್ ರೂಪಿಸಬೇಕು.ನಿಮ್ಮ ಮಗು ಕಟ್ಟಡದ ಉದ್ಯಾನವನದಲ್ಲಿದ್ದರೆ, ನಿಮ್ಮ ಅನುಮತಿಯಿಲ್ಲದೆ ಗೇಟ್‌ಗಳ ಹೊರಗೆ ಹೆಜ್ಜೆ ಹಾಕಲು ಅನುಮತಿಸಬಾರದು. ಶಾಲೆಯಿಂದ ಮನೆಗೆ ಬರುವಾಗ ಅಥವಾ ಇನ್ಯಾವುದೇ ಕೆಲಸಗಳಿರಬಹುದು. ರಾತ್ರಿ ಸಮಯ ನಿರ್ಜನವಾದ ಕಾಲುದಾರಿಗಳ ಮೂಲಕ ಶಾರ್ಟ್‌ಕಟ್ ಆಗಿ ಬರದಂತೆ ತಿಳಿಸಬೇಕು. ಶಾಲೆಯಿಂದ ಮಕ್ಕಳು ಬರುವಾಗ ದುಷ್ಕರ್ಮಿಗಳು ಹೊಂಚುಹಾಕುತ್ತಿರುತ್ತಾರೆ. ಹೀಗಾಗಿ ಅಪರಿಚಿತರಿಂದ ಲಿಫ್ಟ್‌ಗಳನ್ನ ಸ್ವೀಕರಿಸಬಾರದು.
ದಾರಿ ಕೇಳುವ ನೆಪದಲ್ಲಿ ಅಪಹರಣ:
ಅಪರಿಚಿತ ವ್ಯಕ್ತಿಗಳು ದಾರಿ ಕೇಳಲು ಕಾರಿನ ಬಳಿ ಕರೆದರೆ, ಮಕ್ಕಳ ಸಮೀಪಕ್ಕೆ ಕಾರು ನಿಲ್ಲಿಸಿದರೆ ದೂರ ಸರಿಯುವಂತೆ ಕಾರಿನ ಬಳಿ ಹೋಗದಂತೆ ಪೋಷಕರು ತಿಳಿಸಬೇಕು. ಮಕ್ಕಳ ಮುಗ್ದತೆ ದುರುಪಯೋಗಪಡಿಸಿಕೊಳ್ಳುವ ದುಷ್ಕರ್ಮಿಗಳು ದಾರಿ ತಪ್ಪಿ ಬಂದವರಂತೆ ನಟಿಸಿ, ಮಕ್ಕಳನ್ನ ಕರೆದು ದಾರಿ ಕೇಳುವ ನೆಪದಲ್ಲಿ ಕಾರಿನೊಳಗೆ ಎಳೆದುಕೊಂಡು ಅಪಹರಿಸುವ ಪ್ರಕರಣಗಳು ನಡೆದಿವೆ. ಹೀಗಾಗಿ ಕಾರಿನಿಂದ ಅಪರಿಚಿತರು ಯಾರೇ ಕರೆದರೂ ಹತ್ತಿರಕ್ಕೆ ಹೋಗದಂತೆ ಮಕ್ಕಳಿಗೆ ತಿಳಿಹೇಳಬೇಕು. ಸಾದ್ಯವಾದರ, ಇಂಥ ಮಕ್ಕಳು ಪ್ರತಿಕ್ರಿಯಿಸದೆ ಮುನ್ನಡೆದು ಸಾಗುವಂತೆ ಹೇಳಬೇಕು.
ಮಕ್ಕಳ ಸುರಕ್ಷತೆಗೆ ಪಾಸ್ವರ್ಡ್ ನಂಬರ್ ಕೊಡಿ!
ಹಿಂದೆ ಬೆಂಗಳೂರಿನ ಖಾಸಗಿ ಶಾಲೆಯೊಂದರ ಮಗು ಸಂಜೆ ಪೋಷಕರ ದಾರಿ ಕಾಯುತ್ತಿತ್ತು. ಇದನ್ನ ಗಮನಿಸಿದ್ದ ದುಷ್ಕರ್ಮಿಗಳು. ಪೋಷಕರು ಕಳಿಸಿದ್ದಾರೆ ಆಟೋ ಮೂಲಕ ಮಗುವನ್ನು ಅಪಹರಿಸಲು ಪ್ರಯತ್ನಿಸಿದ್ದ ಘಟನೆ ವರದಿಯಾಗಿತ್ತು. ಆದರೆ ಆ ಮಗುವಿನ ಬುದ್ಧಿವಂತಿಕೆ ಪೋಷಕರ ಮುಂಜಾಗ್ರತೆಯಿಂದ ಅಪಹರಣಕಾರರಿಂದ ಬಚಾವ್ ಆಗಿತ್ತು. ಹೇಗೆ ಗೊತ್ತೆ? ಪೋಷಕರ ಮಗುವಿಗೆ ಒಂದು ಪಾಸ್ವರ್ಡ್ ಕೊಟ್ಟಿದ್ದರು. ಶಾಲೆಗೆ ಯಾರೇ ಬಂದು ಕರೆದರೂ ಅವರ ಬಳಿ ಪಾಸ್ವರ್ಡ್ ಕೇಳಬೇಕು. ನಾವು ಕಳುಹಿಸಿದ್ದರೆ, ಅವರಿಗೆ ಪಾಸ್ವರ್ಡ್ ಗೊತ್ತಿರುತ್ತದೆ ಎಂದು. ಹೀಗಾಗಿ ಆ ಮಗು ಅಪರಿಚಿತ ಆಟೋ ಚಾಲಕನಿಗೆ ಪಾಸ್ವರ್ಡ್ ಹೇಳುವಂತೆ ಕೇಳಿತ್ತು. ತಬ್ಬಿಬ್ಬಾದ ಆಟೋ ಚಾಲಕ ಪಾಸ್ವರ್ಡ್ ಹೇಳಲಾಗಿಲ್ಲ. ಇದರಿಂದ ಇವನು ಅಪಹರಣಕಾರನೆಂದು ಮಗು ಕಿರುಚಿಕೊಂಡಿತ್ತು. ಅಲ್ಲಿಂದ ದುಷ್ಕರ್ಮಿ ಕಾಲ್ಕಿತ್ತಿದ್ದ!
ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ಹೋಗಲು ಪೋಷಕರು ಆಟೋಗಳಿಗೆ ಕೆಲವೊಮ್ಮೆ ಮನೆಯವರೇ ಹೋಗಿ ಕರೆದುಕೊಂಡು ಬರುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಪೋಷಕರು ಕಳಿಸಿದ್ದಾರೆಂದು ದುಷ್ಕರ್ಮಿಗಳೇ ಅಪಹರಿಸುವ ಸಾದ್ಯತೆ ಇದೆ. ಹೀಗಾಗಿ ಮಕ್ಕಳಿಗೆ ರಹಸ್ಯವಾಗಿ ಪಾಸ್ವರ್ಡ್ ಕೊಡಿ. ಉದಾಹರಣ 1234. ಈ ಪಾಸ್ವರ್ಡ್ ಮಕ್ಕಳು ಮತ್ತು ಮನೆಯವರಿಗೆ ಅಷ್ಟೇ ತಿಳಿದಿರಲಿ. ಮಕ್ಕಳನ್ನು ಕರೆತರಲು ಶಾಲೆಗೆ ಅಪರಿಚಿತರು ಬಂದರೆ ಅವರಿಂದ ಪಾಸ್ವರ್ಡ್ ಕೇಳಿ. ಏಕೆಂದರೆ ಅಪರಿಚಿತರಿಗೆ ಪಾಸ್ವರ್ಡ್ ತಿಳಿದಿರುವುದಿಲ್ಲ. ಇದು ಸದ್ಯದ ಹೆಚ್ಚಿನ ಸುರಕ್ಷಿತ ಪ್ರಯಾಣವಾಗಿದೆ.
ಸಾಮಾಜಿಕ ಜಾಲತಾಣ ಮಕ್ಕಳಿಗೆ ಸೇಫ್ ಅಲ್ಲ:
ಮಕ್ಕಳ ಅಪಹರಣ ಅಥವಾ ದುರುಪಯೋಗ ಕೇವಲ ಹೊರಗಿನಿಂದ ಮಾತ್ರ ಅಲ್ಲ, ಅದು ಒಳಗಿನಿಂದಲೂ ಇದೆ. ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇನ್ಸ್‌ಟಾಗ್ರಾಂ, ರೀಲ್ಸ್ ನಲ್ಲಿ ವಿಡಿಯೋ ಮಾಡುತ್ತಾರೆ. ಆತಂಕದ ವಿಷಯವೆಂದರೆ ಪೋಷಕರೇ ಮಕ್ಕಳಿಗೆ ಅಕೌಂಟ್ ಕ್ರಿಯೆಟ್ ಮಾಡಿಕೊಡುತ್ತಾರೆ. ಇಂದು ಲಕ್ಷಾಂತರ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಲಾಗಿನ್ ಆಗುತ್ತಾರೆ. ಜಾಲತಾಣಗಳ ದುಷ್ಪಾರಿಣ ಅರಿಯದ ಮಕ್ಕಳು ಮೆಸೇಂಜರ್‌ಗಳ ಮೂಲಕ ಅಪರಿಚಿತರ ಸಂಪರ್ಕಕ್ಕೆ ಬರುತ್ತಾರೆ. ವೈಯಕ್ತಿಕ ಮಾಹಿತಿ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಮಗು ಯಾವ ಶಾಲೆ ಓದುತ್ತಿದೆ, ಯಾವಾಗ ಹೊರಬರುತ್ತಾರೆ ಎಂಬುದೆಲ್ಲ ದುಷ್ಕರ್ಮಿಗಳು ಮಾಹಿತಿ ಕಲೆಹಾಕಿ ಅಪಹರಿಸುವ ಸಾದ್ಯತೆ ಇದೆ. ಹೀಗಾಗಿ ನಿಮ್ಮ ಮಕ್ಕಳು ಉಪಯೋಗಿಸುವ ಅಕೌಂಟ್‌ಗಳ ಮೇಲೆ ಪೋಷಕರು ಕಣ್ಣಿಟ್ಟರಲಿ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡುತ್ತಿದ್ದಾರೆ, ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಲ್ಲವನ್ನು ಪೋಷಕರು ಗಮನಿಸುತ್ತಿರಬೇಕು.