ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬೆಂಗಳೂರಿನ ಇಂದಿರಾನಗರದ ಜೀವನಭೀಮಾನಗರದ ವ್ಯಾಪ್ತಿಯಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ (KPS) ವಿದ್ಯಾರ್ಥಿ ಮಹೇಶ್ 625 ಅಂಕಗಳಿಗೆ 616 ಅಂಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾನೆ.
ವಿಶೇಷ ಅಂದರೆ ಆರು ವರ್ಷಗಳ ಹಿಂದೆ ಕೂಲಿ ಕೆಲಸ ಅರಸಿ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಹೊರಟು ಬಂದಿರುವ ಕುಟುಂಬದ ಬಾಲಕನಾಗಿರೋ ಮಹೇಶ್, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ಈ ಸಾಧನೆ ಮಾಡಿದ್ದಾನೆ.
ಗಣಿತ ಮತ್ತು ಹಿಂದಿಯಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವ ಮಹೇಶ್ ಕನ್ನಡದಲ್ಲೂ 125 ಪೂರ್ಣ ಅಂಕ ಪಡೆದಿದ್ದಾನೆ. ಮಹೇಶನ ಸಾಧನೆಯನ್ನು ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಆತನ ಗುಡಿಸಲಿನ ಮನೆಗೆ ಭೇಟಿ ನೀಡಿದ್ದಾರೆ.
ಸುರೇಶ್ ಕುಮಾರ್ ಖುದ್ದು ಆತನ ಗುಡಿಸಲಿನ ಮನೆಗೆ ಭೇಟಿಯಾಗಿ 5000 ರೂಪಾಯಿ ನಗದು ನೀಡಿ ಅಭಿನಂದಿಸಿದರು.
ಮನೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಮಹೇಶನಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿದರು.
ಅವರ ತಾಯಿ ಮಲ್ಲಮ್ಮ ಅವರಿವರ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದಾರೆ. ಮಹೇಶ್ ಸಹ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸವನ್ನು ಇದುವರೆಗೆ ಮುಗಿಸಿದ್ದಾನೆ.
ಮಹೇಶನಿಗೆ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಓದಬೇಕೆಂಬ ಮಹದಾಸೆಯಿದೆ. ಅವನ ಮನೆ, ಅವನ ಕುಟುಂಬ, ಅವರ ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲ ಕಂಡಾಗ ಕಣ್ತುಂಬಿ ಬಂತು – ಅದೇ ರೀತಿ ಹೃದಯ ತುಂಬಿ ಬಂತು ಎಂದು ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.