ದಕ್ಷಿಣ ಕನ್ನಡದಲ್ಲಿ 36 ಜನರ ವಿರುದ್ಧ ಗಡೀಪಾರು ಕ್ರಮ, ಹಿಂದೂ ಮತ್ತು ಮುಸ್ಲಿಂ ಕಾರ್ಯಕರ್ತರ ಪಟ್ಟಿ

Published : Jun 03, 2025, 09:52 AM ISTUpdated : Jun 03, 2025, 09:53 AM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ಶಂಕಿತ ಹಿನ್ನೆಲೆಯಲ್ಲಿ 36 ಜನರ ವಿರುದ್ಧ ಗಡೀಪಾರು ಕ್ರಮ ಆರಂಭಿಸಲಾಗಿದೆ. 21 ಹಿಂದೂ ಮತ್ತು 15 ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಈ ಪಟ್ಟಿಯಲ್ಲಿದ್ದು, ಪ್ರಮುಖ ಠಾಣಾ ವ್ಯಾಪ್ತಿಗಳಿಂದ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ.

PREV
16

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಕದಡುವ ಶಂಕಿತ ಹಿನ್ನೆಲೆಯಲ್ಲಿರುವ ಒಟ್ಟು 36 ಜನರ ವಿರುದ್ಧ ಗಡೀಪಾರು ಕ್ರಮ ಕೈಗೊಳ್ಳಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಪೈಕಿ 21 ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು 15 ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಗಡೀಪಾರು ಪಟ್ಟಿ ಒಳಗೊಂಡಿದ್ದಾರೆ. ಪ್ರಮುಖವಾಗಿ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ವಿಟ್ಲ, ಪುಂಜಾಲಕಟ್ಟೆ, ಬೆಳ್ತಂಗಡಿ, ಪುತ್ತೂರು ನಗರ ಮತ್ತು ಗ್ರಾಮಾಂತರ, ಕಡಬ, ಉಪ್ಪಿನಂಗಡಿ, ಸುಳ್ಯ ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಗಳಿಂದ ಈ ಪಟ್ಟಿ ತಯಾರಾಗಿದ್ದು, ಇವರುಗಳಿಗೆ ಕ್ರಮ ಕ್ರಮವಾಗಿ ನೋಟೀಸ್‌ಗಳನ್ನು ಸಹಾಯಕ ಆಯುಕ್ತರು ಜಾರಿಗೊಳಿಸಿದ್ದಾರೆ.

26

ಗಡೀಪಾರು ಕ್ರಮ ಎದುರಿಸುತ್ತಿರುವ ಪ್ರಮುಖ ಹಿಂದೂ ಮುಖಂಡರಲ್ಲಿ ಅರುಣ್‌ ಪುತ್ತಿಲ, ಮಹೇಶ್‌ ಶೆಟ್ಟಿ ತಿಮರೋಡಿ, ಭರತ್‌ ಕುಮ್ಡೇಲು, ಲತೇಶ್‌ ಗುಂಡ್ಯ, ಚರಣ್‌, ಪವನ್‌ ಕುಮಾರ್‌ ಮೊದಲಾದವರಿದ್ದಾರೆ. ಮುಸ್ಲಿಂ ಸಂಘಟನೆಗಳ ಮುಖಂಡರಲ್ಲಿ ಹಕೀಂ ಕೂರ್ನಡ್ಕ, ಅಬ್ದುಲ್‌ ಖಾದರ್‌, ಅಬ್ದುಲ್‌ ಲತೀಫ್‌, ಮೊಯಿದ್ದೀನ್‌ ಅದ್ನಾನ್‌, ಮಹಮ್ಮದ್‌ ಅಶ್ರಫ್‌, ಅಜೀಜ್‌, ಶಮೀರ್‌, ಮೊದಲಾದವರಿದ್ದಾರೆ. ಪ್ರದೇಶವಾರು ಗಡೀಪಾರು ಪ್ರಸ್ತಾವನೆ ಪಡೆದವರವರಲ್ಲಿ ಉಪ್ಪಿನಂಗಡಿ – 6, ಬೆಳ್ಳಾರೆ – 2, ಸುಳ್ಯ – 2, ಕಡಬ – 1, ಪುತ್ತೂರು ಗ್ರಾಮಾಂತರ – 3, ಪುತ್ತೂರು ನಗರ – 6, ಬೆಳ್ತಂಗಡಿ – 2, ಪುಂಜಾಲಕಟ್ಟೆ – 1, ಬಂಟ್ವಾಳ ನಗರ – 4, ಬಂಟ್ವಾಳ ಗ್ರಾಮಾಂತರ – 6, ವಿಟ್ಲ – 3 ಜನರಿದ್ದಾರೆ.

36

ಪುತ್ತೂರು ಹಾಗೂ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರ ಮೂಲಕ ಎಲ್ಲಾ 36 ಮಂದಿಗೂ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ನೋಟೀಸ್‌ಗಳಲ್ಲಿ, ಅವರು ಸ್ವತಃ ಅಥವಾ ತಮ್ಮ ಪರವಾಗಿ ನ್ಯಾಯವಾದಿಗಳ ಮೂಲಕ ಹಾಜರಾಗಿ ಆಕ್ಷೇಪಣೆ ಹಾಗೂ ವಾದ ಮಂಡನೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಕಾನೂನು ಪ್ರಕ್ರಿಯೆಯ ಹಂತಗಳನ್ನು ಹತ್ತಿರದಿಂದ ಅನುಸರಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಗಡೀಪಾರು ಕ್ರಮದ ಬಗ್ಗೆ ತೀರ್ಮಾನಿಸಲು ಲಭ್ಯವಿರುವ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

46

ಗಡೀಪಾರು ಪ್ರಕ್ರಿಯೆಗೆ ಯುವಕನ ಆಕ್ರೋಶ

ಅರುಣ್ ಕುಮಾರ್ ಪುತ್ತಿಲ ಸಹಿತ 36 ಜನರ ವಿರುದ್ಧ ಗಡೀಪಾರು ಪ್ರಕ್ರಿಯೆ ಕುರಿತು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. “ತಾಕತ್ತು ಇದ್ರೆ ಗಡೀಪಾರು ಮಾಡಿ ನೋಡಿ… ಒಮ್ಮೆ ಪುತ್ತಿಲರ ವಿಷಯಕ್ಕೆ ಬನ್ನಿ, ನೋಡೋಣ ಏನಾಗತ್ತೆ!” ಎಂಬ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ ಯುವಕ, ಸೆಲ್ಫಿ ವಿಡಿಯೋ ಮೂಲಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ. ಜಿಲ್ಲೆಯಲ್ಲಿ ಹಿಂದೂಗಳು ಸತ್ತಿದ್ದಾರಾ , ಬದುಕಿದ್ದಾರಾ ನೋಡೋಣ. ನಾವು ಯಾವ ಅಪರಾಧ ಮಾಡಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಹೇಳಿ, ಆಮೇಲೆ ಗಡೀಪಾರು ನೋಟೀಸ್ ನೀಡಿ. ಹಿಂದೂ ಸಮಾಜ ಯಾವ ಅಕ್ರಮವೆಸಗಿದೆ? ನಾವು ಬಿಡೋ ಪ್ರಶ್ನೆಯೇ ಇಲ್ಲ. 24 ಗಂಟೆಗಳ ಕಾಲ ಹಿಂದೂತ್ವಕ್ಕಾಗಿ ದುಡಿಯುತ್ತೇವೆ. ಕರಾವಳಿಯಲ್ಲಿ ಕೋಮುಗಲಭೆ ನಿಲ್ಲಿಸಲು ನಿಮ್ಮ ಶಕ್ತಿ ಬಳಸಿ . ಹಿಂದೂ ಸಂಘಟನೆಗಳ ಧ್ವನಿಯನ್ನು ತುಳಿಯಲು ಅಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.

56

ಮಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಹೋರಾಟಗಾರರ ಧ್ವನಿಯನ್ನು ತುಳಿಯುವ ಕಾರ್ಯವನ್ನು ಹೋರಾಟಗಾರರೇ ಮಾಡುತ್ತಿರುವುದು ದುಃಖದ ಸಂಗತಿ ಎಂದರು. “ಈ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಕೇರಳ ಮಾದರಿಯ ಹತ್ಯೆಗಳ ಸರಮಾಲೆ ಆರಂಭವಾಗಿದೆ. ಎನ್‌ಐಎ ತನಿಖೆ ಸಮಯದಲ್ಲಿಯೂ ಈ ಹತ್ಯೆಗಳಲ್ಲಿ ಕೇರಳದ ಕೈವಾಡವಿದೆ ಎಂಬುದು ಬಹಿರಂಗವಾಗಿದೆ" ಎಂದರು. “ಡಾ. ಕೆ. ಪ್ರಭಾಕರ ಭಟ್ ಅವರ ಮೇಲೆ ದಾಖಲಾದ ಪ್ರಕರಣ, ಅರುಣ್ ಕುಮಾರ್ ಪುತ್ತಿಲರ ವಿರುದ್ಧ ಜಾರಿಗೊಂಡ ಗಡೀಪಾರು ಕ್ರಮ ಈ ಪ್ರಕರಣಗಳು ಕಾಂಗ್ರೆಸ್‌ನ ರಾಜಕೀಯ ಷಡ್ಯಂತ್ರದ ಭಾಗವಾಗಿದೆ. ಸುಹಾಸ್ ಹತ್ಯೆಯ ಸಂದರ್ಭದಲ್ಲಿ, ಇಡೀ ಹಿಂದೂ ಸಮಾಜವೇ ವಿಷಾದಿಸುತ್ತಿದ್ದಾಗ ಕಲ್ಲಡ್ಕ ಭಟ್ ಅವರು ಶ್ರದ್ಧಾಂಜಲಿ ಸಭೆಯಲ್ಲಿ ಸಮಾಜದ ಭಾವನೆ ವ್ಯಕ್ತಪಡಿಸಿದ್ದರು. ಹಿಂದೂ ಸಮಾಜದಲ್ಲಿ ಆತಂಕವಿದೆ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ನಳಿನ್ ಹೇಳಿದ್ದಾರೆ.

66

ಪೊಲೀಸರ ಮೇಲೆ ಒತ್ತಡ ಹೇರಿ, ಕೇಸುಗಳನ್ನು ದಾಖಲು ಮಾಡಿ ಹಿಂದೂ ಮುಖಂಡರನ್ನು ಭಯಹುಟ್ಟಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇರಬಹುದು. ಆದರೆ ಈ ರೀತಿಯ ಕೃತ್ಯಗಳಿಂದ ಹಿಂದೂ ಸಮಾಜದ ಶಕ್ತಿ ಕುಗ್ಗುವುದಿಲ್ಲ. ಇವು ದುರ್ಬಲಗೊಳಿಸುವ ಯತ್ನವಾಗಿದೆ. ಈ ಹಿಂದಿನಿಂದ ನಡೆದ ಎಲ್ಲ ಘಟನೆಗಳ ಸಮಗ್ರ ತನಿಖೆ ಆಗಬೇಕು. ಕೇರಳ ಮಾದರಿಯ ಹತ್ಯೆಗಳ ಹಿಂದೆ ನಿಂತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶಭಕ್ತ ಸಂಘಟನೆ ಎಂಬುದಾಗಿ ನ್ಯಾಯಾಲಯದಲ್ಲಿಯೇ ಎರಡು ಬಾರಿ ತೀರ್ಪು ಪ್ರಕಟವಾಗಿದೆ. ನಿಷೇಧಿಸಿದ್ರೂ ಇದೊಂದು ರಾಷ್ಟ್ರಭಕ್ತ ಸಂಘಟನೆ ಎನ್ನುವ ಉಲ್ಲೇಖ ನ್ಯಾಯಾಂಗ ದಾಖಲೆಗಳಲ್ಲಿದೆ. ಹೀಗಿರುವಾಗ, ಈ ಸಂಘಟನೆಯ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಬೆದರಿಸುವ ಅಗತ್ಯವಿಲ್ಲ. ಅವರನ್ನು ಗೌರವಯುತವಾಗಿ ಸಮೀಕ್ಷೆಗೆ ಕರೆದರೆ, ಅವರು ಹಾಜರಾಗುತ್ತಾರೆ. ಓಡಿ ಹೋಗುವವರಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Read more Photos on
click me!

Recommended Stories