ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ಹೆಸರನಲ್ಲಿ ಕೋಟಿ ಕೋಟಿ ಲೂಟಿ!

First Published | Oct 22, 2024, 10:17 PM IST

Malabar Multistate Agro Cooperative Society fraud case: ಒನ್ ಟು ಡಬ್ಬಲ್ ಲಾಭ ಬರುತ್ತೆ ಅಂದರೆ ಸಾಕು ಜನರು ನನಗೂ ಇರಲಿ, ನಮ್ಮ ಮಕ್ಕಳಿಗೂ ಇರಲಿ, ಮೊಮ್ಮಕ್ಕಳಿಗೂ ಆಗುತ್ತೆ ಅಂತ ಮುಗಿ ಬೀಳುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ ಎನ್ನುವುದಂತು ಸತ್ಯ. ಅದು ಸರಿ ಇದೆಯೋ ಇಲ್ವೋ, ಇಲ್ಲ ಮೋಸ ಆಗುತ್ತದೋ ಎನ್ನುವುದರ ಬಗ್ಗೆ ಆಲೋಚಿಸುವುದಕ್ಕೆ ಹೋಗಲ್ಲ. ಹಾಗೆಯೇ ಇಲ್ಲಿಯೂ ಲಾಭದ ಆಸೆಗೆ ಬಿದ್ದೋ ಇಲ್ಲ, ಪರಿಚಯದವರು ಎನ್ನುವ ಮುಲಾಜಿಗೆ ಬಿದ್ದೋ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿ ಈಗ ತಾವು ಹಾಕಿ ಅಸಲು ಇಲ್ಲ ಎನ್ನುವಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. 

ಹೌದು ಕೇರಳ ಮೂಲದ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯೊಂದು ಕೊಡಗಿನ ನೂರಾರು ಜನರಿಗೆ ಲಕ್ಷ ಲಕ್ಷ ರೂಪಾಯಿಗೆ ಟೋಪಿ ಹಾಕಿ ರಾತ್ರೋ ರಾತ್ರಿ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದೆ. ಹೌದು ಕೇಂದ್ರ ಕೋಪರೇಟಿವ್ ಸೊಸೈಟಿ ನಿಯಮಗಳ ಪ್ರಕಾರ ನೋಂದಣಿ ಮಾಡಿದ್ದೇವೆ ಎಂದು ನಂಬಿಸಿದ ಕಂಪನಿಯು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪ ವಿರಾಜಪೇಟೆ ಸೇರಿದಂತೆ ವಿವಿಧೆಡೆ ತನ್ನ ಶಾಖೆಗಳನ್ನು ತೆರೆದು ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತಿತ್ತು. ಜನರಿಂದ ಡೈಲಿ ಪಿಗ್ಮಿ, ಆರ್ ಡಿ ಹಾಗೂ ಎಫ್ಡಿಗಳನ್ನು ಸಂಗ್ರಹಿಸಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದೆ. 

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಶಾಖೆಗಳನ್ನು ತೆರೆದು ಸ್ಥಳೀಯರನ್ನೇ ವ್ಯವಸ್ಥಾಪಕರು, ಸಿಬ್ಬಂದಿ ಅಂತ ನೇಮಿಸಿ ಕಾರ್ಯ ನಿರ್ವಹಿಸಿದೆ. ಎರಡು ವರ್ಷಗಳಿಂದ ಹಣ ಸಂಗ್ರಹಿಸುತ್ತಿದ್ದ ಕಂಪನಿಯ ಮಾಲೀಕರು ಎಲ್ಲಾ ಹಣವನ್ನು ಕ್ಯಾಶ್ ಮೂಲಕವೇ ಕೇರಳಕ್ಕೆ ಕೊಂಡೊಯ್ದಿದ್ದಿದ್ದಾರೆ. ಜೊತೆಗೆ ಬಹುತೇಕ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಹೀಗೆ ಕೋಟಿ ಕೋಟಿ ಹಣವನ್ನು ಲಪಟಾಯಿಸುತ್ತಿದ್ದಂತೆ ಮಾಲೀಕರು ಇತ್ತ ತಿರುಗಿ ನೋಡಿಲ್ಲ. ಆದರೆ ಹೀಗೆ ಮೋಸವಾದ ಎರಡು ತಿಂಗಳ ಬಳಿಕವೂ ಕೆಲವು ಸಿಬ್ಬಂದಿ ಜನರಿಂದ ಪಿಗ್ಮಿ, ಆರ್ಡಿ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆ. ಎರಡು ವರ್ಷಗಳಿಂದ ಕಟ್ಟಿರುವ ಪಿಗ್ಮಿ ಮೆಚ್ಯುರಿಟಿ ಆಗಿದ್ದು ಅದನ್ನು ವಾಪಸ್ ಕೊಡಿಸುವಂತೆ ಕೇಳಿದಾಗ ಪಿಗ್ಮಿ ಕಟ್ಟಿಸಿಕೊಳ್ಳುತ್ತಿದ್ದವರು ಪಿಗ್ಮಿ ಸಂಗ್ರಹಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಆಗ ಅನುಮಾನ ಬಂದಿದ್ದರಿಂದ ಜನರು ಹೋಗಿ ನೋಡಲಾಗಿ ಅಲ್ಲಿ ಕಚೇರಿಯೇ ಮುಚ್ಚಿರುವುದು ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡ ಜನರು ಗೋಣಿಕೊಪ್ಪ, ಕುಶಾಲನಗರ ಮಡಿಕೇರಿ ಮುಂತಾದೆಡೆಗಳಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋಪರೇಟಿವ್ ಸೊಸೈಟಿ ವಿರುದ್ಧ ದೂರು ನೀಡಿದ್ದಾರೆ.

Tap to resize

 ಈ ಕುರಿತು ಮಾಹಿತಿ ನೀಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಹಣ ಸಂಗ್ರಹಿಸಿರುವ ಯಾವುದಕ್ಕೂ  ಯಾವುದೇ ದಾಖಲೆಗಳಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಂಪನಿಯನ್ನು ನಿಯಮಗಳ ಪ್ರಕಾರ ನೊಂದಣಿಯನ್ನೇ ಮಾಡಿಲ್ಲ. ಅಧಿಕ ಪ್ರಮಾಣದ ಬಡ್ಡಿ ಕೊಡುತ್ತೇವೆ ಎಂದು ನಂಬಿಸಿ ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವುದು ಕಂಡುಬಂದಿದೆ. ಜಿಲ್ಲೆಯ ಎಲ್ಲೆಡೆ ಯಾರೂ ಕೂಡ ಈ ಕಂಪನಿ ಅಥವಾ ಕಂಪನಿಯ ಸಿಬ್ಬಂದಿಗೆ ಹಣ ಪಾವತಿಸಬೇಡಿ. ಹಣ ಕಟ್ಟಿ ಕಳೆದುಕೊಂಡಿರುವವರು ನಿಮ್ಮ ಹತ್ತಿರದ ಪೊಲೀಸ್  ಠಾಣೆಗಳಿಗೆ ದೂರು ನೀಡಿ. ಕಂಪನಿಯ ಮಾಲೀಕರನ್ನು ಈಗಾಗಲೇ ಬಂಧಿಸಿದ್ದು, ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಜನರಿಗೆ ಕೊಡಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಅಧಿಕ ಬಡ್ಡಿಯ ಆಸೆಗೆ ಒಳಗಾದ ಜನರು ಮೋಸ ಹೋಗಿರುವುದಂತು ಸತ್ಯ.

Latest Videos

click me!