ಬೆಂಗಳೂರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಇನ್ಫೋಸಿಸ್ ಉದ್ಯೋಗಿ ಆತ್ಮಹ*ತ್ಯೆ; ಪತಿ ಪ್ರವೀಣ್ ಬಂಧನ

Published : Aug 28, 2025, 05:14 PM IST

ಬೆಂಗಳೂರಿನಲ್ಲಿ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ ವರದಕ್ಷಿಣೆ ಕಿರುಕುಳದಿಂದ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪತಿ, ಅತ್ತೆ ಮತ್ತು ನಾದಿನಿಯ ವಿರುದ್ಧ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬಸ್ಥರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

PREV
18

ಬೆಂಗಳೂರು (ಆ.28): ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (27) ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

28

ಘಟನೆಯ ವಿವರ:

ಇನ್ಫೋಸಿಸ್ ಉದ್ಯೋಗಿಯಾಗಿರುವ ಮಹಿಳಾ ಟೆಕ್ಕಿ ಶಿಲ್ಪಾ ಕಳೆದ ಮೂರು ವರ್ಷಗಳ ಹಿಂದೆ ಪ್ರವೀಣ್ (38) ಎನ್ನುವವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮದುವೆಯ ಸಮಯದಲ್ಲಿ ಶಿಲ್ಪಾ ಕುಟುಂಬಸ್ಥರು 50 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದರು.

38

ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟರೂ, ಮದುವೆಯಾದಾಗಿನಿಂದಲೂ ಪತಿ ಪ್ರವೀಣ್, ಅತ್ತೆ ಶಾಂತ ಮತ್ತು ನಾದಿನಿ ಪ್ರಿಯಾ ಸಣ್ಣಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿ ಶಿಲ್ಪಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

48

ಕೆಲವು ತಿಂಗಳ ಹಿಂದೆ ಗಲಾಟೆ ತೀವ್ರಗೊಂಡು ಶಿಲ್ಪಾ ತನ್ನ ತವರು ಮನೆಗೆ ಹೋಗಿದ್ದರು. ನಂತರ ಪ್ರವೀಣ್ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿ ಶಿಲ್ಪಾಳನ್ನು ವಾಪಸ್ ಕರೆದುಕೊಂಡು ಹೋಗಿದ್ದರು. 

ಶಿಲ್ಪಾ ಗರ್ಭಿಣಿಯಾಗಿದ್ದರೂ ಸಹ, ಕುಟುಂಬಸ್ಥರ ಕಿರುಕುಳ ಮುಂದುವರೆದಿತ್ತು ಎಂದು ಮೃತಳ ತಾಯಿ ಶಾರದಾ ಹೇಳಿದ್ದಾರೆ.

58

ಆಗಸ್ಟ್ 26ರ ರಾತ್ರಿ, ಶಿಲ್ಪಾ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಈ ಬಗ್ಗೆ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದ ಪ್ರವೀಣ್ ಕುಟುಂಬದವರು, 'ಹಾರ್ಟ್‌ಅಟ್ಯಾಕ್‌' ಆಗಿದೆ ಎಂದು ಹೇಳಿ ವಂಚಿಸಲು ಪ್ರಯತ್ನಿಸಿದ್ದರು. ಆದರೆ, ಶಿಲ್ಪಾ ಕುಟುಂಬದವರು ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ಬಯಲಾಗಿದೆ.

68

ಕುಟುಂಬದ ಆಕ್ರೋಶ:

ಶಿಲ್ಪಾ ತಾಯಿ ಶಾರದಾ ಮಾತನಾಡಿ, 'ನನ್ನ ಮಗಳಿಗೆ ಪ್ರತಿದಿನ ಕಿರುಕುಳ ಕೊಡುತ್ತಿದ್ದರು. ಇತ್ತೀಚೆಗೆ ₹10 ಲಕ್ಷ ಹಣವನ್ನೂ ನೀಡಿದ್ದೆವು. ಆದರೆ ಕಿರುಕುಳ ನಿಲ್ಲಲಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಇಂತಹ ಘಟನೆ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು' ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ತಮ್ಮ ಅಳಿಯ ಪ್ರವೀಣ್ ಕಳೆದ 3 ತಿಂಗಳಿಂದ ತನ್ನೊಂದಿಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

78

ಸುದ್ಧಗುಂಟೆಪಾಳ್ಯ ಪೊಲೀಸರು ಶಿಲ್ಪಾ ಪತಿ ಪ್ರವೀಣ್ ಅವರನ್ನು ಬಂಧಿಸಿದ್ದು, ಅತ್ತೆ ಶಾಂತ ಮತ್ತು ನಾದಿನಿ ಪ್ರಿಯಾ ವಿರುದ್ಧವೂ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ಕೂಡ ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ನಡೆಸುತ್ತಿದ್ದಾರೆ.

88

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಅದನ್ನು ನಾಗಸಂದ್ರದಲ್ಲಿರುವ ಶಿಲ್ಪಾ ಕುಟುಂಬದ ನಿವಾಸಕ್ಕೆ ರವಾನಿಸಿದ್ದಾರೆ. ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಸಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories