BJP ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಯುವಿ ಸ್ಪರ್ಧೆ..? ವಿಶ್ವಕಪ್ ಹೀರೋ ಹೇಳಿದ್ದೇನು?

First Published | Mar 3, 2024, 1:09 PM IST

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಆಡಳಿತರೂಢ ಬಿಜೆಪಿ ಪಕ್ಷವು ಮೊದಲ ಹಂತದ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಯುವಿ ಸ್ಪಷ್ಟನೆ ನೀಡಿದ್ದಾರೆ.
 

2024ರ ಬಹುನಿರೀಕ್ಷಿತ ಲೋಕಸಭಾ ಚುನಾವಣೆಗೆ ಈಗಾಗಲೇ ಭರದ ಸಿದ್ದತೆಗಳು ಶುರುವಾಗಿವೆ. ಚುನಾವಣೆ ಇನ್ನೂ ಘೋಷಣೆಯಾಗದೇ ಇದ್ದರೂ, ಬಿಜೆಪಿ ಈಗಾಗಲೇ ಮೊದಲ ಹಂತದಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಇನ್ನು ಈ ಬಾರಿಯ ಚುನಾವಣೆಯಲ್ಲಿಯೂ ಕೆಲವು ಕ್ರೀಡಾಪಟುಗಳು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ. ಈ ಪೈಕಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಹೆಸರೂ ಕೂಡಾ ಒಂದಾಗಿದೆ.

Latest Videos


ಯುವರಾಜ್ ಸಿಂಗ್ ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದೀಗ ಈ ವಿಚಾರವಾಗಿ ಎರಡು ಬಾರಿಯ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮೊದಲ ಬಾರಿಗೆ ತುಟಿಬಿಚ್ಚಿದ್ದು, ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ತಮಗೆ ಅಗತ್ಯವಿರುವ ಅಶಕ್ತರಿಗೆ ನೆರವಾಗಬೇಕು ಎನ್ನುವ ಉದ್ದೇಶವಿದೆ. ಹೀಗಾಗಿ You We Can ಫೌಂಡೇಶನ್ ಮೂಲಕ ಜನರಿಗೆ ನೆರವಾಗುವ ಉದ್ದೇಶ ಇಟ್ಟುಕೊಂಡಿದ್ದಾರೆ. ನಾವು ನೀವೆಲ್ಲಾ ಸೇರಿ ಜನರಲ್ಲಿ ಬದಲಾವಣೆ ತರೋಣ ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಪಂಜಾಬ್‌ನ ಗುರ್‌ದಾಸ್‌ಪುರದಲ್ಲಿ ಪ್ರಖ್ಯಾತ ನಟ ಸನ್ನಿ ಡಿಯೋಲ್ ಬಿಜೆಪಿ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಯುವಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇನ್ನು ಕೆಲವು ದಿನಗಳ ಹಿಂದಷ್ಟೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಯುವಿ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಸ್ವತಃ ಕ್ಯಾನ್ಸರ್ ರೋಗವನ್ನು ಮಣಿಸಿ ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿಯಾಗಿರುವ ಯುವರಾಜ್ ಸಿಂಗ್, ಇದೀಗ You We Can ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯ ಮಾಡುವುದರ ಜತೆಗೆ ಕ್ಯಾನ್ಸರ್ ಕುರಿತಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. 

click me!