ನವದೆಹಲಿ: ಯಶಸ್ವಿ ಜೈಸ್ವಾಲ್ ಅವರ ಹೆಸರು ಕೇಳಿದಾಕ್ಷಣವೇ ತಕ್ಷಣಕ್ಕೆ ಹಲವರ ಮನದಲ್ಲಿ ಮೂಡುವ ಚಿತ್ರ ಪಾನಿಪೂನಿ ಮಾರುವ ಹುಡುಗ ಈಗ ಕ್ರಿಕೆಟಿಗನಾಗಿ ಮಿಂಚುತ್ತಿರುವುದು. ಆದರೆ ಯಶಸ್ವಿ ಜೈಸ್ವಾಲ್ ಪಾನಿಪೂರಿ ಮಾರಿ ಜೀವನ ಸಾಗಿಸುತ್ತಿರಲಿಲ್ಲ. ಇದೊಂದು ಶುದ್ದ ಸುಳ್ಳು ಎನ್ನುವ ವಿಚಾರವನ್ನು ಯಶಸ್ವಿ ಜೈಸ್ವಾಲ್ ಕೋಚ್ ಬಾಯ್ಬಿಟ್ಟಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
ಯಶಸ್ವಿ ಜೈಸ್ವಾಲ್ ಕಳೆದ ಕೆಲ ವರ್ಷಗಳಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ ಇದೀಗ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ
213
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಯಶಸ್ವಿ ಜೈಸ್ವಾಲ್ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ.
313
ಕಡುಬಡತನದ ಹಿನ್ನೆಲೆಯಿಂದ ಬಂದ ಯಶಸ್ವಿ ಜೈಸ್ವಾಲ್, ಪಾನಿಪೂರಿ ಮಾಡಿ ಜೀವನ ಸಾಗಿಸುತ್ತಿದ್ದರು ಎನ್ನುವ ಸುದ್ದಿಗಳು ಯಶಸ್ವಿ ಜೈಸ್ವಾಲ್ ಜತೆ ಥಳುಕು ಹಾಕಿಕೊಳ್ಳುತ್ತಲೇ ಬಂದಿವೆ. ಆದರೆ ಜೀವನೋಪಾಯಕ್ಕಾಗಿ ಯಶಸ್ವಿ ಜೈಸ್ವಾಲ್ ಆಗಲಿ ಅಥವಾ ಅವರ ತಂದೆಯಾಗಲಿ ಪಾನಿಪೂರಿ ಮಾರಿಲ್ಲ ಎನ್ನುವ ಅಚ್ಚರಿಯ ಸಂಗತಿಯನ್ನು ಯಶಸ್ವಿ ಕೋಚ್ ಬಾಯ್ಬಿಟ್ಟಿದ್ದಾರೆ.
413
ರಿಪಬ್ಲಿಕ್‌ವರ್ಲ್ಡ್.ಕಾಂ ವೆಬ್‌ಸೈಟ್ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರುವ ಯಶಸ್ವಿ ಜೈಸ್ವಾಲ್ ಕೋಚ್ ಜ್ವಾಲಾ ಸಿಂಗ್, ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ನಾನು ಯಶಸ್ವಿ ಜೈಸ್ವಾಲ್ ಸಂದರ್ಶನ ಮಾಡುವಂತೆ ಹಲವರನ್ನು ಹಲವು ಬಾರಿ ಕೇಳಿಕೊಂಡಿದ್ದರೂ ಅವರೆಲ್ಲರೂ ನಿರಾಕರಿಸುತ್ತಲೇ ಬಂದಿದ್ದರು.
513
ಈ ಬಗ್ಗೆ ಯಶಸ್ವಿ ನನಗೆ ಫೋನ್ ಮಾಡಿ, ಪತ್ರಕರ್ತರು ನನ್ನನ್ನು ಸಂದರ್ಶನ ಮಾಡಲು ಬಯಸಿದ್ದಾರೆ ಎಂದು ಹೇಳಿದರು. ನಾನು ಸರಿ ಹಾಗಿದ್ದರೆ ಎಂದು ಒಪ್ಪಿಗೆ ಸೂಚಿಸಿದೆ. ನಾನಾಗ ಇಂಗ್ಲೆಂಡ್‌ನಲ್ಲಿದ್ದೆ. ಈ ಸಂದರ್ಭದಲ್ಲಿ ಯಶಸ್ವಿ ಬಳಿ ಕೆಲವು ವೈಯುಕ್ತಿಕ ಜೀವನದ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.
613
ಈ ಸಂದರ್ಭದಲ್ಲಿ ಮುಗ್ದ ಮನಸ್ಸಿನ ಯಶಸ್ವಿ ಜೈಸ್ವಾಲ್ ಪಾನಿಪೂರಿ ಮಾರಿದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸ್ಟೋರಿಗೆ ತೂಕವಿರಲಿ ಎನ್ನುವ ಉದ್ದೇಶದಿಂದ ಅವರೆಲ್ಲರೂ ಪಾನಿಪೂರಿ ವಿಚಾರವನ್ನೇ ಹೈಲೈಟ್ ಮಾಡಿದರು. ಈ ಸ್ಟೋರಿ ಓದಿ ಸ್ವತಃ ನಾನೇ ಒಂದು ಕ್ಷಣ ಆಘಾತಕ್ಕೊಳಗಾದೆ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.
713
ಯಾಕೆಂದರೆ ಯಶಸ್ವಿ ಜೈಸ್ವಾಲ್ ಅವರನ್ನು ನಾನು ನನ್ನ ಮಗನ ರೀತಿಯಲ್ಲಿ ಬೆಳೆಸಿದ್ದೇನೆ ಹಾಗೂ ಅವನಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇನೆ. ಪ್ರತಿಬಾರಿ ಯಶಸ್ವಿ ಒಳ್ಳೆಯ ಪ್ರದರ್ಶನ ತೋರಿದಾಗ ಸ್ಟಾಲ್‌ವೊಂದರಲ್ಲಿ ವ್ಯಕ್ತಿಯ ಜತೆ ಪಾನಿಪೂರಿ ಮಾರುವ ಫೋಟೋ ಕಾಣಿಸಿಕೊಳ್ಳುತ್ತದೆ. ಆದರೆ ಅದು ಯಶಸ್ವಿ ತಂದೆಯಲ್ಲ, ಯಶಸ್ವಿ ತಂದೆ ಯಾವತ್ತೂ ಪಾನಿಪೂರಿ ಮಾರಿಲ್ಲ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.
813
ನಾನು ಪದೇ ಪದೇ ಹೇಳುತ್ತಲೇ ಬಂದಿದ್ದೇನೆ, ಯಶಸ್ವಿ ಜೈಸ್ವಾಲ್ ನನ್ನ ಬಳಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಬಳಿಕ ಯಾವತ್ತೂ ಪಾನಿಪೂರಿ ಮಾರಿಲ್ಲ. ಯಶಸ್ವಿ ಜೈಸ್ವಾಲ್, 2013ರಿಂದ ನನ್ನ ಬಳಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಯಶಸ್ವಿ ಜೈಸ್ವಾಲ್ ಪಾನಿಪೂರಿ ಮಾರಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು ಎನ್ನುವುದು ಒಳ್ಳೆಯ ಹೆಡ್‌ಲೈನ್ ಆದರೂ ಅದರಲ್ಲಿ ಕೇವಲ 5% ಅಷ್ಟೇ ಸತ್ಯವಿದೆ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.
913
ಯಶಸ್ವಿ ಜೈಸ್ವಾಲ್, ಕ್ರಿಕೆಟ್ ಕಲಿಯಲು ಮುಂಬೈಗೆ ಬಂದಾಗ ಟೆಂಟ್‌ನಲ್ಲಿ ವಾಸಿಸುತ್ತಿದ್ದರು. ಆಗ ಕೆಲವು ದಿನಗಳ ಮಟ್ಟಿಗೆ ಪಾನಿಪೂರಿ ಮಾರಿರಬಹುದು. ಅದೇ ಘಟನೆಯನ್ನೇ ಮಾಧ್ಯಮಗಳು ಹೈಲೈಟ್ ಮಾಡಿವೆಯಷ್ಟೇ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.
1013
ಯಶಸ್ವಿ ಜೈಸ್ವಾಲ್ ಮುಂಬೈಗೆ ಬಂದಾಗ ಅವರಿಗೆ ಮೂಲಭೂತ ಸೌಕರ್ಯಗಳು ಸಹ ಇರಲಿಲ್ಲ. ವಿದ್ಯುತ್ ಶಕ್ತಿ, ಉತ್ತಮ ಆಹಾರ ಸಹ ಅವರಿಗೆ ಸಿಗುತ್ತಿರಲಿಲ್ಲ. ಇನ್ನು ಮಳೆಗಾಲದ ಸಮಯದಲ್ಲಿ ಅವರಿದ್ದ ಟೆಂಟ್‌ಗೆ ನೀರು ಕೂಡಾ ನುಗ್ಗುತ್ತಿತ್ತು. ಆಗ ಕಷ್ಟಗಳನ್ನು ಆತ ಎದುರಿಸಿದ್ದಾನೆ ಎಂದು ಕೋಚ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
1113
ಆದರೆ ನನ್ನ ಬಳಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಬಳಿಕ ಆತನ ಈ ಎಲ್ಲಾ ಸಂಕಷ್ಟಗಳಿಗೆ ಪೂರ್ಣವಿರಾಮ ಬಿದ್ದಿತು. ಕಳೆದ 10 ವರ್ಷಗಳಿಂದ ನಾನು ಅವರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದೇನೆ. ಹೀಗಿದ್ದೂ ಕೆಲವರು ಅಂಡರ್-19 ವಿಶ್ವಕಪ್‌ಗೂ ಮುನ್ನ ಆತ ಪಾನಿಪೂರಿ ಮಾರುತ್ತಿದ್ದ ಎಂದು ಬರೆಯುತ್ತಾರೆ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.
1213
ಈ ರೀತಿಯ ಸ್ಟೋರಿಗಳಿಂದಾಗಿ ನಿಜವಾಗಿಯೂ ಆತನಿಗೆ ನೆರವಾದ ಹಲವರ ಕೊಡುಗೆಯನ್ನು ಕಡೆಗಣಿಸಿದಂತಾಗುತ್ತದೆ. ಆತ ಈ ಹಂತದ ಕ್ರಿಕೆಟಿಗನಾಗಲು ಹಲವರ ಪಾತ್ರವಿದೆ. ಆತ ಮುಂಬೈಗೆ ಬಂದಾಗ ಅವರ ಪೋಷಕರು ಆತನಿಗೆ ತಿಂಗಳಿಗೆ 1000 ರುಪಾಯಿಗಳನ್ನು ಕಳಿಸಿಕೊಡುತ್ತಿದ್ದರು ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.
1313
ಯಶಸ್ವಿ ಜೈಸ್ವಾಲ್ ಅವರ ತಂದೆ ಪೇಂಟ್ ಅಂಗಡಿಯ ಮಾಲೀಕರಾಗಿದ್ದಾರೆ. ಯಾವೆಲ್ಲಾ ಕ್ರಿಕೆಟಿಗರು ಇಂದು ನಮ್ಮ ಮುಂದಿದ್ದಾರೋ ಅವರೆಲ್ಲರೂ ಸರಿಯಾದ ಕೋಚಿಂಗ್, ಫುಡ್ ಹಾಗೂ ವಸತಿ ವ್ಯವಸ್ಥೆ ಪಡೆದು ಬಂದಿರುತ್ತಾರೆ. ಸರಿಯಾದ ಸಮಯ ಹಾಗೂ ಹಣವನ್ನು ಇನ್ವೆಸ್ಟ್ ಮಾಡದೆ ಯಾರೂ ಕ್ರಿಕೆಟಿಗನಾಗಲು ಸಾಧ್ಯವಿಲ್ಲ. ನಾನು ಆತನಿಗಾಗಿ ನನ್ನ 9 ವರ್ಷಗಳ ಅಮೂಲ್ಯ ಸಮಯವನ್ನು ಆತನಿಗಾಗಿ ಮೀಸಲಿಟ್ಟಿದ್ದೇನೆ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.