2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದ ವಿವಿಧ 10 ಸ್ಟೇಡಿಯಂಗಳಲ್ಲಿ ಜರುಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ.
ಇನ್ನು ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ಭಾರತ ಹಾಗೂ ಪಾಕಿಸ್ತಾನ ನಡುವೆ ನೆಟ್ಟಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 14ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಜಗತ್ತಿನ ಅತಿದೊಡ್ಡ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇನ್ನು ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೀನ್ ಉಲ್ ಹಸನ್, ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತದ ಮುಸ್ಮಿಮರು, ಪಾಕಿಸ್ತಾನ ತಂಡಕ್ಕೆ ಸಪೋರ್ಟ್ ಮಾಡುತ್ತಾರೆ ಎಂದಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 1992ರಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಭಾರತ ತಂಡವು 7 ಬಾರಿಯೂ ಗೆಲುವಿನ ನಗೆ ಬೀರಿದ್ದು, ಇದೀಗ ಸತತ 8ನೇ ಗೆಲುವಿನ ಮೇಲೆ ಚಿತ್ತ ನೆಟ್ಟಿದೆ.
ನಾದೀರ್ ಅಲಿ ಪಾಡ್‌ಕಾಸ್ಟ್‌ನಲ್ಲಿ, ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಹಾಗೂ ಪಾಕಿಸ್ತಾನಕ್ಕೆ ಯಾವ ರೀತಿಯ ಸಪೋರ್ಟ್ ಭಾರತದಲ್ಲಿ ಸಿಗುತ್ತದೆ ಎನ್ನುವ ಪ್ರಶ್ನೆಗೆ 45 ವರ್ಷದ ರಾಣಾ, ಭಾರತದಲ್ಲಿ ಪಂದ್ಯ ಆಯೋಜನೆಗೊಂಡಿದೆ ಎಂದರೆ ಖಂಡಿತವಾಗಿಯೂ ಭಾರತವೇ ಫೇವರೇಟ್. ಆದರೆ ಭಾರತದಲ್ಲಿ ನಡೆಯುವ ಪಾಕಿಸ್ತಾನದ ಪಂದ್ಯಗಳಲ್ಲಿ ಭಾರತೀಯ ಮುಸ್ಮಿಮರು ಪಾಕಿಸ್ತಾನ ತಂಡವನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.
ಭಾರತ ಮುಸಲ್ಮಾನರು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಾರೆ. ಯಾಕೆಂದರೆ ನಾನು ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಎರಡು ಸರಣಿಗಳನ್ನು ಆಡಿದ್ದೇನೆ, ಅಲ್ಲಿ ಸಾಕಷ್ಟು ಮಂದಿ ನಮ್ಮನ್ನು ಬೆಂಬಲಿಸಿದ್ದರು. ಇನ್ನು ಇಂಜಮಾಮ್ ಉಲ್ ಹಕ್ ನಾಯಕತ್ವದಲ್ಲಿ ಇಂಡಿಯನ್ ಸೂಪರ್ ಲೀಗ್ ಆಡುವಾಗಲೂ ಅಲ್ಲಿನ ಮುಸಲ್ಮಾನರು ಉತ್ತಮ ಸಪೋರ್ಟ್ ನಮಗೆ ನೀಡಿದ್ದರು ಎಂದು ರಾಣಾ ಹೇಳಿದ್ದಾರೆ.
ರಾಣಾ ನವೀದ್ ಉಲ್ ಹಸನ್, ತಾವು ಕ್ರಿಕೆಟ್ ಆಡುವ ವೇಳೆ ರಾಹುಲ್ ದ್ರಾವಿಡ್ ಔಟ್ ಮಾಡುವುದು ತುಂಬಾ ಕಷ್ಟವಾಗಿತ್ತು ಹಾಗೂ ವಿರೇಂದ್ರ ಸೆಹ್ವಾಗ್ ಅವರನ್ನು ಔಟ್ ಮಾಡುವುದು ತುಂಬಾ ಸುಲಭದ ಸಂಗತಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.