ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರನ್ನು ಜಂಟಲ್‌ಮನ್ ಕ್ರಿಕೆಟರ್ ಎಂದೇ ಕರೆಯಲಾಗುತ್ತದೆ. ಎಂತಹ ಕಠಿಣ ಪರಿಸ್ಥಿತಿಯೇ ಇರಲಿ, ಮೈದಾನದೊಳಗಾಗಲಿ ಅಥವಾ ಮೈದಾನದಾಚೆಗಾಗಲಿ ದ್ರಾವಿಡ್ ತಾಳ್ಮೆ ಕಳೆದುಕೊಂಡವರಲ್ಲ.
ಓರ್ವ ಸ್ಟಾರ್ ಕ್ರಿಕೆಟಿಗ, ಬಿಸಿಸಿಐ ಎನ್ನುವ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಭಾರತ ಕ್ರಿಕೆಟ್ ತಂಡದ ಹೆಡ್‌ಕೋಚ್ ಆಗಿದ್ದರೂ ಸಹಾ ರಾಹುಲ್ ಅತ್ಯಂತ ಸರಳ ಜೀವನ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಆಟದಲ್ಲಿ ಕೆಲವೊಮ್ಮೆ ರಾಹುಲ್ ದ್ರಾವಿಡ್ ಆಕ್ರಮಣಕಾರಿ ಪ್ರದರ್ಶನ ತೋರಿರಬಹುದು ಆದರೆ, ವ್ಯಕ್ತಿಗತವಾಗಿ ದ್ರಾವಿಡ್ ಆ ರೀತಿಯಿಲ್ಲ. ಆದರೆ ದ್ರಾವಿಡ್ ಒಮ್ಮೆ ರಸ್ತೆಯಲ್ಲಿ ಕಾರಿನೊಳಗೆ ಇದ್ದುಕೊಂಡು, ಅಕ್ಕಪಕ್ಕ ಜನರ ಮೇಲೆ ಕೂಗಾಡಿ, ಕಾರಿನ ಗಾಜು ಒಡೆದ ದೃಶ್ಯಾವಳಿಗಳನ್ನು ಅವರ ತಾಯಿಗೆ ನಂಬಲೂ ಸಾಧ್ಯವಾಗಿರಲಿಲ್ಲವಂತೆ..!
ಹೌದು, ರಾಹುಲ್ ದ್ರಾವಿಡ್, ಅಭಿನಯಿಸಿದ ಜಾಹಿರಾತೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಜಾಹಿರಾತಿಯಲ್ಲಿ ಯಾವಾಗಲೂ ಶಾಂತ ರೀತಿಯಲ್ಲಿರುವ ರಾಹುಲ್ ದ್ರಾವಿಡ್, ಅತ್ಯಂತ ಸಿಟ್ಟಾಗಿರುವಂತೆ ನಟಿಸಿದ್ದರು.
ಕಾರಿನಲ್ಲಿ ಕುಳಿತು ಜಾಹಿರಾತಿನಲ್ಲಿ ನಟಿಸುವ ವೇಳೆ ರಾಹುಲ್ ದ್ರಾವಿಡ್, ಅಕ್ಕಪಕ್ಕದಲ್ಲಿರುವವರ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿ ಕೂಗಾಡುತ್ತಿದ್ದರು. ಇದಷ್ಟೇ ಅಲ್ಲದೇ ಕಾರಿನ ಗಾಜನ್ನು ಒಡೆದು ಹಾಕಿ ನಾನು ಇಂದಿರಾನಗರದ ಗೂಂಡಾ ಎಂದು ದ್ರಾವಿಡ್ ಕೂಗಾಡುತ್ತಾರೆ.
ಇದನ್ನು ನೋಡಿದ ರಾಹುಲ್ ದ್ರಾವಿಡ್ ಅವರ ತಾಯಿ, ದ್ರಾವಿಡ್ ನಟಿಸಿದ ಜಾಹಿರಾತು ಮೆಚ್ಚಿಕೊಂಡಿರಲಿಲ್ಲ ಎನ್ನುವ ಸತ್ಯವನ್ನು ಸ್ವತಃ ಟೀಂ ಇಂಡಿಯಾ ಹೆಡ್‌ಕೋಚ್ ಬಾಯ್ಬಿಟ್ಟಿದ್ದಾರೆ.
ಭಾರತ ಪರ 164 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್, "ನನ್ನಮ್ಮ ನಾನು ಇಂದಿರಾನಗರದ ಗೂಂಡಾ ಜಾಹಿರಾತಿನ ಬಗ್ಗೆ ಸಹಮತಿ ಹೊಂದಿರಲಿಲ್ಲ. ನಾನು ಕಾರಿನ ಗಾಜು ಒಡೆಯುವ ದೃಶ್ಯಗಳು ಅವರಿಗೆ ಇಷ್ಟವಾಗಿರಲಿಲ್ಲ. ಈ ಘಟನೆಯು ನನ್ನ ಜೀವನದ ಅತ್ಯಂತ ನಾಚಕೀಯ ಘಟನೆಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.
ಈ ಜಾಹಿರಾತು ಮುಂಬೈನ ರಸ್ತೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ಕುರಿತಂತೆ, "ಜನಗಳ ನಡುವೆ ಮುಂಬೈನ ರಸ್ತೆಯಲ್ಲಿ ಈ ರೀತಿ ಅರಚಾಡಿದ್ದು, ಸ್ವತಃ ನನಗೆ ಒಂದು ರೀತಿ ನಾಚಿಕೆಯಾಗುವಂತೆ ಮಾಡಿತು. ನನ್ನ ಅಕ್ಕಪಕ್ಕದಲ್ಲಿರುವ ಜನರಿಗೆ ನಾನು ನಟನೆ ಮಾಡುತ್ತಿದ್ದೇನೆ ಎಂದು ಗೊತ್ತಿತ್ತು. ಆದರೂ ಕೂಡಾ ನನಗೆ ಅದು ಸರಿ ಎನಿಸಲಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ 2012ರಲ್ಲಿ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಮೊದಲು ದ್ರಾವಿಡ್, ಭಾರತ ಅಂಡರ್ 19 ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡರು.
ಇದಾದ ಬಳಿಕ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದ ದ್ರಾವಿಡ್, 2021ರಿಂದೀಚೆಗೆ ಭಾರತ ಸೀನಿಯರ್ಸ್ ಕ್ರಿಕೆಟ್ ತಂಡದ ಹೆಡ್‌ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಸದ್ಯ ಭಾರತ ತಂಡದ ಜತೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ.