WPL 2024: ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published | Mar 17, 2024, 2:28 PM IST

ಬೆಂಗಳೂರು: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಚಾಂಪಿಯನ್ ಪಟ್ಟಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಹೀಗಿರುವಾಗಲೇ ಚಾಂಪಿಯನ್‌ ತಂಡಕ್ಕೆ ಸಿಗುವ ನಗದು ಬಹುಮಾನ ಎಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

2024ರ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಪ್ರಶಸ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ನೇರವಾಗಿ ಫೈನಲ್ ಪ್ರವೇಶಿಸಿದರೆ, ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ತಂಡವು ಎಲಿಮಿನೇಟರ್ ಹಂತದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

Latest Videos


ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಮುಂಬೈಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿತ್ತು. ಇನ್ನೊಂದೆಡೆ ಆರ್‌ಸಿಬಿ ತಂಡವು ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಇನ್ನು ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆಗುವ ತಂಡವು ಬರೋಬ್ಬರಿ 6 ಕೋಟಿ ರುಪಾಯಿಗಳನ್ನು ನಗದು ಬಹುಮಾನದ ರೂಪದಲ್ಲಿ ಜೇಬಿಗಿಳಿಸಿಕೊಳ್ಳಲಿದೆ.

2023ರ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್‌ 6 ಕೋಟಿ ರುಪಾಯಿ ನಗದು ಬಹುಮಾನ ಪಡೆದಿತ್ತು. ಇನ್ನು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ 3 ಕೋಟಿ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡಿತ್ತು.

ಈ ಬಾರಿಯ WPL ಟೂರ್ನಿಗೂ ಮುನ್ನ ನಗದು ಬಹುಮಾನದ ವಿಚಾರವಾಗಿ ಯಾವುದೇ ಬದಲಾವಣೆಯನ್ನು ಘೋಷಿಸಿಲ್ಲ. ಹೀಗಾಗಿ ಈ ಬಾರಿ ಕೂಡಾ ಕಳೆದ ಬಾರಿಯಷ್ಟೇ ಬಹುಮಾನವನ್ನು ವಿನ್ನರ್ ಹಾಗೂ ರನ್ನರ್ ಅಪ್ ತಂಡಗಳು ಪಡೆಯುವುದು ಬಹುತೇಕ ಖಚಿತ ಎನಿಸಿದೆ.

ಇನ್ನು ಆರೆಂಜ್‌ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ವಿಜೇತರು ತಲಾ 5 ಲಕ್ಷ ರುಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ. ಸದ್ಯ ಆರ್‌ಸಿಬಿಯ ಎಲೈಸಿ ಪೆರ್ರಿ ಆರೆಂಜ್‌ ಕ್ಯಾಪ್ ಹೊಂದಿದ್ದಾರೆ.

ಇನ್ನು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಆಟಗಾರ್ತಿಯು 2.5 ಲಕ್ಷ ರುಪಾಯಿಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಯಾರು ಈ ಅವಾರ್ಡ್ ಪಡೆಯಲಿದ್ದಾರೆ ಎನ್ನುವುದನ್ನು ಕಾಮೆಂಟ್ ಮಾಡಿ.
 

click me!