Women's Day 2022: ಇಡೀ ದೇಶವೇ ಹೆಮ್ಮೆಪಡುವಂತ ಸಾಧನೆ ಮಾಡಿದ ಮಹಿಳೆಯರಿವರು..!

First Published | Mar 8, 2022, 3:38 PM IST

ಬೆಂಗಳೂರು: ಜಗತ್ತಿನಾದ್ಯಂತ ಮಾರ್ಚ್ 08ನೇ ತಾರೀಕಿನಂದು ವಿಶ್ವ ಮಹಿಳಾ ದಿನಾಚರಣೆಯನ್ನು (Women's Day 2022) ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮಹಿಳೆಯರ ಸಾಧನೆಯನ್ನು ಮೆಲುಕು ಹಾಕಲಾಗುತ್ತದೆ. ಮಹಿಳೆಯರು ತಮ್ಮ ಮುಂದಿರುವ ಎಲ್ಲಾ ತಡೆಗೋಡೆಗಳನ್ನು ಪುಡಿಮಾಡಿ, ತಮ್ಮ ಬದುಕು ಉಜ್ವಲವಾಗಿ ಕಟ್ಟಿಕೊಂಡ ಕ್ರೀಡಾ ಸಾಧಕೀಯರಿಗೆ ವಂದನೆ, ಅಭಿನಂದನೆ. ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಭಾರತದ ಕ್ರೀಡಾ ತಾರೆಯರ ಕಿರುಪರಿಚಯ ಹೀಗಿದೆ.

1. ಮಿಥಾಲಿ ರಾಜ್

ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಇಡೀ ದೇಶ ಕಂಡಂತಹ ದಿಗ್ಗಜ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂದರೆ ಅತಿಶಯೋಕ್ತಿಯಲ್ಲ. ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌. ಆರು ಏಕದಿನ ವಿಶ್ವಕಪ್ ಆಡಿದ ಸಾಧಕಿ ಮಿಥಾಲಿ ರಾಜ್. 

2. ಸೈನಾ ನೆಹ್ವಾಲ್

ಸೈನಾ ನೆಹ್ವಾಲ್‌ ಒಲಿಂಪಿಕ್ಸ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪದಕ ಗೆದ್ದ ಭಾರತ ಮೊದಲ ಶಟ್ಲರ್. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ. ಇದಷ್ಟೇ ಅಲ್ಲದೇ BWF ಸಿಂಗಲ್ಸ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಏಕೈಕ ಶಟ್ಲರ್‌ ಎನ್ನುವ ಕೀರ್ತಿ ಸೈನಾ ಹೆಸರಿನಲ್ಲಿದೆ.

Tap to resize

3. ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ ಟೆನಿಸ್‌ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಆದರೂ ಸಾನಿಯಾ ಅವರ ಸಾಧನೆಯನ್ನು ಅವರ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಸಾನಿಯಾ 2005ರಲ್ಲಿ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಪ್ರಧಾನ ಸುತ್ತಿಗೇರಿದ ಭಾರತದ ಮೊದಲ ಮಹಿಳಾ ಟೆನಿಸ್ ಆಟಗಾರ್ತಿ ಎನಿಸಿದ್ದರು. 

4. ಜೂಲನ್ ಗೋಸ್ವಾಮಿ

ಮಿಥಾಲಿ ರಾಜ್ ಬ್ಯಾಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ್ದರೆ, ಈ ಖುಷಿಯನ್ನು ಡಬಲ್ ಮಾಡಿದ್ದು ಜೂಲನ್ ಗೋಸ್ವಾಮಿಯವರ ಪ್ರದರ್ಶನ. ಎರಡು ದಶಕಗಳಿಂದ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಮಹಿಳಾ ಬೌಲರ್ ಎನಿಸಿದ್ದಾರೆ.

5. ಮೇರಿ ಕೋಮ್

ಬಾಕ್ಸಿಂಗ್‌ನಲ್ಲಿ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದು ಮೇರಿ ಕೋಮ್ ಎನ್ನುವ ಛಲಗಾರ್ತಿ. ಮೇರಿ ಕೋಮ್ ಆರು ಬಾರಿ ಬಾಕ್ಸಿಂಗ್ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸೇರಿದಂತೆ ಬಾಕ್ಸಿಂಗ್ ವೃತ್ತಿಜೀವನದಲ್ಲಿ ಮೇರಿ ಕೋಮ್ ಒಟ್ಟು 13 ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಜಯಿಸಿದ್ದಾರೆ

6. ಪಿ.ವಿ. ಸಿಂಧು

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಮಹಿಳಾ ತಾರೆ ಎಂದರೆ ಅದು ಪಿ.ವಿ. ಸಿಂಧು. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಡೊಡ್ಡಿದ್ದರು. ಇದಷ್ಟೇ ಅಲ್ಲದೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಏಕೈಕ ಮಹಿಳಾ ಶಟ್ಲರ್ ಕೂಡಾ ಹೌದು.

ವಿಶೇಷ ಸಾಧಕಿಯರು

ಅವನಿ ಲೆಖರಾ(ಪ್ಯಾರಾ-ಶೂಟಿಂಗ್): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸಹಿತ ಎರಡು ಪದಕ ಗೆದ್ದ ಸಾಧಕಿ
ದಿಪಾ ಕರ್ಮಾಕರ್(ಜಿಮ್ನಾಸ್ಟಿಕ್): ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯಳು. ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ವಿಜೇತೆ
ಪಿ.ಟಿ. ಉಷಾ(ಅಥ್ಲೀಟ್): ಏಷ್ಯನ್ ಗೇಮ್ಸ್‌ನಲ್ಲಿ 4 ಚಿನ್ನದ ಪದಕ. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 14 ಚಿನ್ನ ಸೇರಿದಂತೆ ಒಟ್ಟಾರೆ ವೃತ್ತಿಜೀವನದಲ್ಲಿ 34 ಪದಕ ಜಯಿಸಿದ್ದರು.
ದೀಪಿಕಾ ಕುಮಾರಿ(ಆರ್ಚರಿ): ಆರ್ಚರಿ ವಿಶ್ವಕಪ್‌ ಟೂರ್ನಿಯಲ್ಲಿ ಚಿನ್ನ ಸೇರಿದಂತೆ ಒಟ್ಟಾರೆ ನಾಲ್ಕು ಚಿನ್ನದ ಪದಕ ವಿಜೇತೆ ಬಿಲ್ಲುಗಾರ್ತಿ
 

Latest Videos

click me!