Team India
ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಏಕಪಕ್ಷೀಯವಾಗಿ ನಡೆದಿತ್ತು. ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 222 ರನ್‌ಗಳ ಗೆಲುವು ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಬೆಂಗಳೂರಿನತ್ತ ನೆಟ್ಟಿದ್ದು, ಮಾರ್ಚ್ 12ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿಯಲಿವೆ. ಈ ಪಂದ್ಯಕ್ಕೆ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಭಾರತ ತಂಡ ಕೂಡಿಕೊಂಡಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಅಕ್ಷರ್ ಪಟೇಲ್ ಟೆಸ್ಟ್ ಪಂದ್ಯವನ್ನಾಡಲು ಸಂಪೂರ್ಣ ಫಿಟ್ನೆಸ್ ಗಳಿಸಿದ್ದಾರೆ. ಪರಿಣಾಮ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಬದಲಿಗೆ ಅಕ್ಷರ್ ಪಟೇಲ್ ತಂಡ ಕೂಡಿಕೊಂಡಿದ್ದಾರೆ. ಕುಲ್ದೀಪ್ ಯಾದವ್ ಮೊದಲ ಟೆಸ್ಟ್‌ನಲ್ಲಿ ಬೆಂಚ್ ಕಾಯಿಸಿದ್ದರು.
ಇನ್ನು ಅಕ್ಷರ್ ಪಟೇಲ್ ಕೆಲದಿನಗಳ ಹಿಂದಷ್ಟೇ ಕೋವಿಡ್‌ಗೆ ತುತ್ತಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದರು.
ಇದೀಗ ಅಕ್ಷರ್ ಪಟೇಲ್ ಸಂಪೂರ್ಣ ಫಿಟ್ನೆಸ್ ಸಾಧಿಸಿರುವುದರಿಂದ ಭಾರತ ತಂಡ ಕೂಡಿಕೊಂಡಿಡ್ದಾರೆ. ಆದರೆ ಈ ಕುರಿತಂತೆ ಬಿಸಿಸಿಐ ಅಧಿಕೃತವಾದ ಪ್ರಕಟಣೆ ಹೊರಡಿಸಿಲ್ಲ. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಜಯಂತ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕಳೆದ ವರ್ಷ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಅಕ್ಷರ್ ಪಟೇಲ್ 11 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ್ದರು. ಇದೀಗ ಮತ್ತೊಮ್ಮೆ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಮಿಂಚಲು ಎಡಗೈ ಸ್ಪಿನ್ನರ್ ಎದುರು ನೋಡುತ್ತಿದ್ದಾರೆ.