ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ವೇಗಿ ಮೊಹಮದ್ ಶಮಿಗೆ 33 ವರ್ಷ. ಭಾರತದ ಪ್ರಮುಖ ವೇಗದ ಬೌಲರ್ ಆಗಿ ಶಮಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಭಾರತದ ಪರ ವಿವಿಧ 177 ಪಂದ್ಯಗಳಲ್ಲಿ 415 ವಿಕೆಟ್‌ಗಳನ್ನು ಕಬಳಿಸುವ ಮೂಲಕ ನಿರ್ಣಾಯಕ ಆಸ್ತಿಯಾಗಿದ್ದಾರೆ.
ಗಮನಾರ್ಹವಾಗಿ ಅವರು ವೇಗವಾಗಿ 100 ವಿಕೆಟ್ ಕಬಳಿಸಿದ ಭಾರತೀಯ ಎಂಬ ದಾಖಲೆಯನ್ನು ಹೊಂದಿದ್ದಾರೆ ಮತ್ತು ODI ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಎರಡನೇ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಒಂದೇ ಪಂದ್ಯದಲ್ಲಿ 7 ವಿಕೆಟ್ ಕಿತ್ತು ಹೀರೋ ಆಗಿದ್ದಾರೆ.
ಇಂತಹ ಶಮಿ ಬದುಕು ವೈಯಕ್ತಿಕವಾಗಿ ಹಾಯಿ ತಪ್ಪಿದ ದೋಣಿಯಾಗಿದೆ. ತನಗಿಂತ 10 ವರ್ಷಕ್ಕೆ ದೊಡ್ಡವಳಾದ ಪ್ರಸಿದ್ಧ ಮಾಡೆಲ್, ಚಿಯರ್ ಗರ್ಲ್ ಹಸೀನಾ ಜಾನ್ ಳೊಂದಿಗಿನ ಪ್ರೀತಿಯಲ್ಲಿ ಬಿದ್ದು, ಮದುವೆಯಾಗಿ ಈಗ ವಿಚ್ಚೇಧನದವರೆಗೆ ಬಂದು ನಿಂತಿದೆ. ಆಕೆಗಿದು ಮೊದಲ ಮದುವೆಯಲ್ಲ. 2002ರಲ್ಲಿ ಶೇಖ್ ಸೈಫುದ್ದೀನ್ ಎಂಬಾತನೊಂದಿಗೆ ಮದುವೆಯಾಗಿ 2010ರಲ್ಲಿ ವಿಚ್ಚೇಧನ ಪಡೆದಿದ್ದಳು.
ಮಾಡೆಲ್ ಹಸಿನ್ ಜಹಾನ್ ತನ್ನ ಪತಿ ಕ್ರಿಕೆಟಿಗ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪಗಳನ್ನು ಒಳಗೊಂಡಂತೆ ಸರಣಿ ಆರೋಪಗಳನ್ನು ಮಾಡಿದ್ದಳು. ಈ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು.
ಶಮಿ ವಿರುದ್ಧ ಹಸಿನ್ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ವಿವಿಧ ಮಹಿಳೆಯರೊಂದಿಗೆ ಸಂಭಾಷಣೆಗಳನ್ನು ಉಲ್ಲೇಖಿಸಿ ಮತ್ತು ಟೆಲಿಫೋನ್ ರೆಕಾರ್ಡಿಂಗ್‌ಗಳನ್ನು ಸಾಕ್ಷಿಯಾಗಿ ಒದಗಿಸಿದ್ದು, ಇದ್ಯಾವುದು ಈವರೆಗೆ ಸಾಬೀತಾಗಿಲ್ಲ.
ಶಮಿ ಈ ಎಲ್ಲಾ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದರು, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಸಂಬಂಧಿಸಿದಂತೆ, "ನಾನು ನನ್ನ ದೇಶಕ್ಕಾಗಿ ಸಾಯುತ್ತೇನೆ ಹೊರತು ಎಂದಿಗೂ ದ್ರೋಹ ಮಾಡುವುದಿಲ್ಲ" ಎಂದು ದೃಢವಾಗಿ ಹೇಳಿದ್ದರು.
ಕಳೆದ ಜುಲೈನಲ್ಲಿ ಹಸಿನ್ ಜಹಾನ್ ಮತ್ತು ಮೊಹಮ್ಮದ್ ಶಮಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಒಂದು ತಿಂಗಳೊಳಗೆ ಪರಿಹರಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.
ಮೊಹಮ್ಮದ್ ಶಮಿ 2012 ರಲ್ಲಿ ಐಪಿಎಲ್ ಸಮಯದಲ್ಲಿ ಮೊದಲ ಬಾರಿಗೆ ಹಸಿನ್ ಜಹಾನ್ ಅವರನ್ನು ಭೇಟಿಯಾದರು. ಶಮಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ ಆಡುತ್ತಿದ್ದಾಗ ಅದೇ ತಂಡದಲ್ಲಿ ಹಸಿನ್ ಜಹಾನ್ ಚಿಯರ್‌ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಶಮಿಗೆ ತನಗಿಂತ 10 ವರ್ಷ ದೊಡ್ಡವಳಾಗಿರುವ ಹಸಿನ್ ನಡುವೆ ಪ್ರೇಮಾಂಕುರವಾಗಿತ್ತು.
ಶಮಿ ಮತ್ತು ಹಸಿನ್ ಜೂನ್ 6, 2014 ರಂದು ವಿವಾಹವಾದರು ಮತ್ತು ಮದುವೆಯ ನಂತರ ಹಸಿನ್ ಜಹಾನ್ ಚಿಯರ್ ಲೀಡರ್ ಕೆಲಸವನ್ನು ತೊರೆದರು. ಮಾತ್ರವಲ್ಲ ಮಾಡೆಲಿಂಗ್ ಕ್ಷೇತ್ರ ಸಹ ತೊರೆದಳು. ದಂಪತಿಗಳು 2015 ರಲ್ಲಿ ಆಯಿರಾ ಶಮಿ ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು.
ಪತ್ನಿ ಹಸಿನ್ ಮಾಡಿದ ತನ್ನ ಮೇಲಿನ ಆರೋಪಕ್ಕೆ ಬೇಸತ್ತು ಹೋಗಿದ್ದ ಶಮಿ, ಮೂರು ಬಾರಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದರು. ಫಿಟ್‌ನೆಸ್ ಕಳೆದುಕೊಂಡು ತಂಡದಲ್ಲಿ ಆಡುವ ಅವಕಾಶ ಕೂಡ ಕಳೆದುಕೊಂಡಿದ್ದರು. ಇದೆಲ್ಲದರ ನಂತರ ಘಟನೆಯಿಂದ ಹೊರಬಂದು, ಮಾನಸಿಕವಾಗಿ ಸದೃಢವಾಗಿ ಮತ್ತೆ ದೇಶಕ್ಕಾಗಿ ಆಡುತ್ತಿದ್ದಾರೆ. ಜೊತೆಗೆ ಪತ್ನಿ ವಿರುದ್ಧ ಕಠಿಣ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.