ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಉಭಯ ತಂಡದ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಜರ್ನಿ, ಭಾರತದ ಪ್ರದರ್ಶನ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಈ ವಿಶ್ವಕಪ್ ಟೂರ್ನಿಯನ್ನು ರಾಹುಲ್ ದ್ರಾವಿಡ್‌ಗಾಗಿ ಗೆಲ್ಲಬೇಕು ಎಂದಿದ್ದಾರೆ.
ರಾಹುಲ್ ದ್ರಾವಿಡ್ 2003ರ ವಿಶ್ವಕಪ್ ಫೈನಲ್ ಆಡಿದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿನಿಧಿಸುವುದೇ ಅತೀ ದೊಡ್ಡ ಅವಕಾಶ ಎಂದು ರಾಹುಲ್ ಪದೇ ಪದೇ ಹೇಳುತ್ತಿದ್ದರು ಎಂದು ರೋಹಿತ್ ಹೇಳಿದ್ದಾರೆ.
ಇದೀಗ ರಾಹುಲ್ ದ್ರಾವಿಡ್‌ಗೆ ಟ್ರೋಫಿ ನೀಡಲು ತಂಡ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಶರ್ಮಾ ಮಾತಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2011ರ ವಿಶ್ವಕಪ್ ಟೂರ್ನಿ ಸಚಿನ್ ತೆಂಡೂಲ್ಕರ್‌ಗಾಗಿ ಗೆಲ್ಲಲಾಗಿತ್ತು. ಇದೀಗ ದ್ರಾವಿಡ್‌ಗಾಗಿ ಈ ಟೂರ್ನಿ. ಗುರುವಿಗೆ, ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತಿಗೊಂಡ ದ್ರಾವಿಡ್‌ಗೆ ಅತೀ ದೊಡ್ಡ ಗಿಫ್ಟ್ ಆಗಲಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ನಾವು ಮುಗ್ಗರಿಸಿದಾಗ ರಾಹುಲ್ ದ್ರಾವಿಡ್ ಮಾತುಗಳು ನಮ್ಮಲ್ಲಿ ಧೈರ್ಯ ತುಂಬಿತ್ತು. ಮತ್ತೆ ಹೋರಾಟದ ಮನೋಭಾವ ಮೂಡಿತ್ತು. ದ್ರಾವಿಡ್ ಮಾರ್ಗದರ್ಶನ ನಮಗೆ ಅತೀ ಮುಖ್ಯ ಎಂದು ರೋಹಿತ್ ಹೇಳಿದ್ದಾರೆ.
ಅತೀ ದೊಡ್ಡ ಕ್ರಿಕೆಟ್ ಹೋರಾಟದ ಅಖಾಡದಲ್ಲಿ ನಾನಿರಬೇಕು ಎಂದು ದ್ರಾವಿಡ್ ಹೇಳಿಕೊಂಡಿದ್ದರು. ದ್ರಾವಿಡ್‌ಗಾಗಿ ಗೆಲುವು ನೀಡುವುದು ನಮ್ಮ ಸರದಿ ಎಂದು ರೋಹಿತ್ ಹೇಳಿದ್ದಾರೆ.
ನವೆಂಬರ್ 19 ರಂದು ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪಂದ್ಯ ಆಡಲಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.