1. ಭಾರತದ ಅತ್ಯಂತ ಯಶಸ್ವಿ ನಾಯಕ. ಅವರ ನಾಯಕತ್ವದಲ್ಲಿ ತಂಡ 68 ಪಂದ್ಯಗಳನ್ನಾಡಿದ್ದು 40ರಲ್ಲಿ ಗೆದ್ದಿದೆ.
ವಿರಾಟ್ ಕೊಹ್ಲಿ 2014ರಿಂದ 2022ರ ವರೆಗೆ ಭಾರತ ಟೆಸ್ಟ್ ನಾಯಕರಾಗಿ ಹಲವು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 68 ಟೆಸ್ಟ್ ಪಂದ್ಯಗಳಲ್ಲಿ 40 ಗೆಲುವುಗಳನ್ನು ತಂದುಕೊಡುವ ಮೂಲಕ ಭಾರತ ಕಂಡ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಹಿರಿಮೆಗೆ ಕೊಹ್ಲಿ ಭಾಜನರಾಗಿದ್ದಾರೆ.
2. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ ಒಂದೂ ಸರಣಿ ಸೋತಿಲ್ಲ. 11 ಸರಣಿಗಳಲ್ಲಿ 11ರಲ್ಲೂ ಗೆದ್ದಿದೆ.
ವಿರಾಟ್ ಕೊಹ್ಲಿ ಕಳೆದ ಏಳು ವರ್ಷಗಳ ಕಾಲ ಟೆಸ್ಟ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ತವರಿನಲ್ಲಿ ಒಟ್ಟು 11 ಟೆಸ್ಟ್ ಸರಣಿಗಳನ್ನಾಡಿದ್ದು, 11 ಟೆಸ್ಟ್ ಸರಣಿಯಲ್ಲೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಒಮ್ಮೆಯೂ ತವರಿನಲ್ಲಿ ಟೆಸ್ಟ್ ಸರಣಿ ಸೋತಿಲ್ಲ.
3. ಆಸ್ಪ್ರೇಲಿಯಾ, ಶ್ರೀಲಂಕಾ, ವೆಸ್ಟ್‌ಇಂಡೀಸ್‌ನಲ್ಲಿ ಭಾರತ ಮೊದಲ ಸರಣಿ ಗೆಲುವು ಕಂಡಿದ್ದು ಕೊಹ್ಲಿ ನಾಯಕತ್ವದಲ್ಲಿ
ವಿರಾಟ್ ಕೊಹ್ಲಿಯ ಮತ್ತೊಂದು ಶ್ರೇಷ್ಠ ಸಾಧನೆಯೆಂದರೆ, ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದ್ದು. ಈ ಮೂಲಕ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ಹಾಗೂ ಏಷ್ಯಾದ ಮೊದಲ ನಾಯಕ ಎನ್ನುವ ಕೀರ್ತಿಗೆ ಭಾಜನರಾಗಿದ್ದರು. ಇದಷ್ಟೇ ಅಲ್ಲದೇ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್‌ನಲ್ಲೂ ಟೆಸ್ಟ್ ಸರಣಿ ಜಯಿಸಿತ್ತು.
4. ಅತಿಹೆಚ್ಚು ಟೆಸ್ಟ್ ಗೆಲುವು ಕಂಡ ವಿಶ್ವದ 4ನೇ ನಾಯಕ ಕೊಹ್ಲಿ.
ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿ 40 ಗೆಲುವುಗಳನ್ನು ತಂದುಕೊಡುವ ಮೂಲಕ, ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿದ ಜಗತ್ತಿನ ನಾಲ್ಕನೇ ನಾಯಕ ಎನ್ನುವ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದರು. ಈ ಮೊದಲು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್(53), ರಿಕಿ ಪಾಂಟಿಂಗ್(43) ಹಾಗೂ ಸ್ಟೀವ್ ವಾ(41) ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕರ ಪೈಕಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
5. ಭಾರತದ ನಾಯಕನಾಗಿ ಅತಿಹೆಚ್ಚು ಟೆಸ್ಟ್ ಆಡಿದ ಆಟಗಾರ (68 ಪಂದ್ಯಗಳು)
2014ರಲ್ಲಿ ಧೋನಿಯಿಂದ ಟೆಸ್ಟ್ ನಾಯಕತ್ವ ವಹಿಸಿಕೊಂಡ ಬಳಿಕ ಕಳೆದ 7 ವರ್ಷಗಳಿಂದ ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳನ್ನಾಡಿದ್ದು, ನಾಯಕನಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಭಾರತದ ಮೊದಲ ಕ್ಯಾಪ್ಟನ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ನಾಯಕನಾಗಿ ಅತಿಹೆಚ್ಚು ಶತಕ (20 ಶತಕ) ಬಾರಿಸಿದ ವಿಶ್ವದ 2ನೇ ಆಟಗಾರ ಕೂಡಾ ಹೌದು.
6. ಮೂರುವರೆ ವರ್ಷಗಳ ಕಾಲ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ನಂ.1
ಹೌದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರುವರೆ ವರ್ಷಗಳ ಕಾಲ(42 ತಿಂಗಳು) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸತತ ನಂ.1 ಸ್ಥಾನ ಕಾಯ್ದುಕೊಳ್ಳುವ ಮೂಲಕ ರೆಡ್ ಬಾಲ್ ಕ್ರಿಕೆಟ್‌ನ ಸಾಮ್ರಾಟನಾಗಿ ಮೆರೆದಾಡಿತ್ತು. 2016ರ ಅಕ್ಟೋಬರ್‌ನಿಂದ 2020ರ ಮಾರ್ಚ್ ಆರಂಭದವರೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು.
7. ಕ್ಯಾಲೆಂಡರ್ ವರ್ಷದಲ್ಲಿ 4 ವಿದೇಶಿ ಟೆಸ್ಟ್ ಗೆಲುವು ದಾಖಲಿಸಿದ ಭಾರತದ ಮೊದಲ ನಾಯಕ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2 ಬಾರಿ ಕ್ಯಾಲೆಂಡರ್ ವರ್ಷದಲ್ಲಿ 4 ವಿದೇಶಿ ಟೆಸ್ಟ್ ಗೆಲುವು ದಾಖಲಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ. ಒಂದೇ ವರ್ಷದಲ್ಲಿ ಕೊಹ್ಲಿ ಪಡೆ ಬ್ರಿಸ್ಬೇನ್, ಲಾರ್ಡ್ಸ್, ಓವಲ್ ಹಾಗೂ ಸೆಂಚೂರಿಯನ್‌ನಲ್ಲಿ ಟೆಸ್ಟ್ ಗೆಲುವು ದಾಖಲಿಸಿದೆ. ಇದಕ್ಕೂ ಮೊದಲು 2018ರಲ್ಲಿ ಜೋಹಾನ್ಸ್‌ಬರ್ಗ್, ನಾಟಿಂಗ್‌ಹ್ಯಾಮ್, ಅಡಿಲೇಡ್ ಹಾಗೂ ಮೆಲ್ಬೊರ್ನ್‌ನಲ್ಲಿ ಟೆಸ್ಟ್ ಗೆಲುವು ಸಾಧಿಸಿದೆ.