ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಆತ್ಮವಿಶ್ವಾಸದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವಿರಾಟ್ ಕೊಹ್ಲಿ ಪಡೆ ಹರಿಣಗಳೆದರು ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಕೈಚೆಲ್ಲಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಗಿದೆ.
ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ, ಆ ಬಳಿಕ ಎರಡು ಟೆಸ್ಟ್ ಪಂದ್ಯಗಳಲ್ಲೂ 7 ವಿಕೆಟ್‌ಗಳ ಸೋಲು ಕಂಡಿದೆ. ಟೀಂ ಇಂಡಿಯಾ ಸೋಲಿಗೆ ಪ್ರಮುಖ 5 ಕಾರಣಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಸರಣಿಯುದ್ದಕ್ಕೂ ಕೈಕೊಟ್ಟ ಮಧ್ಯಮ ಕ್ರಮಾಂಕ
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಸೆಂಚೂರಿಯನ್ ಟೆಸ್ಟ್‌ನಲ್ಲಿ ಭಾರತ ಗೆಲುವು ದಾಖಲಿಸಿತ್ತು. ಆ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಬಾರಿಸಿದ ಶತಕ ಮಹತ್ವದ ಪಾತ್ರವಹಿಸಿತ್ತು. ಪೂಜಾರ, ರಹಾನೆ, ವಿರಾಟ್ ಕೊಹ್ಲಿ ಅವರ ಬ್ಯಾಟಿಂದ ಒಂದೇ ಒಂದು ಶತಕ ಮೂಡಿ ಬರಲಿಲ್ಲ
2. ಕೊನೆಯ ಮೂರು ಇನಿಂಗ್ಸ್‌ಗಳಲ್ಲಿ ಆರಂಭಿಕರ ವೈಫಲ್ಯ
ಮೊದಲ ಟೆಸ್ಟ್ ಹಾಗೂ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆರಂಭಿಕರಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಆದರೆ, ಇದಾದ ಬಳಿಕ ಕೊನೆಯ ಮೂರು ಟೆಸ್ಟ್ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ತಂಡದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿತು. ಟೀಂ ಇಂಡಿಯಾ ಆರಂಭಿಕರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಹರಿಣಗಳ ವೇಗಿಗಳು ಅವಕಾಶ ನೀಡಲಿಲ್ಲ.
3. ಕೊನೆಯ ಎರಡು ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬೌಲರ್‌ಗಳ ಸಾಧಾರಣ ಪ್ರದರ್ಶನ
ಭಾರತ ತಂಡವು ಇತ್ತೀಚಿನ ಕೆಲ ವರ್ಷಗಳಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಅಲ್ಪ ಗುರಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಜೋಹಾನ್ಸ್‌ಬರ್ಗ್ ಟೆಸ್ಟ್ ಹಾಗೂ ಕೇಪ್‌ಟೌನ್ ಟೆಸ್ಟ್‌ಗಳಲ್ಲಿ 200+ ರನ್‌ಗಳ ಸವಾಲಿನ ಮೊತ್ತವನ್ನು ಎರಡನೇ ಇನಿಂಗ್ಸ್‌ನಲ್ಲಿ ಕಾಪಾಡಿಕೊಳ್ಳುವಲ್ಲಿ ಭಾರತೀಯ ಬೌಲರ್‌ಗಳು ವಿಫಲವಾಗಿದ್ದು, ಸರಣಿ ಸೋಲಿಗೆ ಕಾರಣವಾಯಿತು.
4. ರವಿಚಂದ್ರನ್ ಅಶ್ವಿನ್‌ಗೆ ಸಿಗದ ಯಶಸ್ಸು
ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಲವು ಟೆಸ್ಟ್ ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದು ಕೇವಲ 3 ವಿಕೆಟ್‌ಗಳನ್ನಷ್ಟೇ ಗಳಿಸಿದ್ದು, ಟೀಂ ಇಂಡಿಯಾ ಫಲಿತಾಂಶದ ಮೇಲೆ ಪ್ರಭಾವ ಬೀರಿತು
5. ಪೀಟರ್‌ಸನ್, ಬವುಮಾ ಎದುರು ಸಿಗದ ಯಶಸ್ಸು
ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಪ್ರತಿಭಾನ್ವಿತ ಬ್ಯಾಟರ್‌ಗಳಾದ ಕೀಗನ್ ಪೀಟರ್‌ಸನ್ ಹಾಗೂ ತೆಂಬ ಬವುಮಾ ಅಕ್ಷರಶಃ ಸವಾರಿ ಮಾಡಿದರು. ಈ ಇಬ್ಬರು ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತಿದ್ದು ಭಾರತೀಯರ ಪಾಲಿಗೆ ಹಿನ್ನೆಡೆಯಾಗಿ ಪರಿಣಮಿಸಿತು. ನಿರ್ಣಾಯಕ ಟೆಸ್ಟ್ ಪಂದ್ಯದಲ್ಲೂ ಈ ಜೋಡಿ ಅಜೇಯ ಜತೆಯಾಟ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿತು.