ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಫ್ರಾಂಚೈಸಿಯು ಈ ಬಾರಿ ರೀಟೈನ್ ಮಾಡಿಕೊಂಡಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಷ್ಟೇ ಅಲ್ಲದೇ ನಾಯಕರಾಗಿಯೂ ಸೈ ಎನಿಸಿಕೊಂಡಿದ್ದಾರೆ.
2020ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತ್ತು. ಆದರೆ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕ್ಷಮತೆಯಿರುವ ಶ್ರೇಯಸ್ ಅಯ್ಯರ್, ಐಪಿಎಲ್‌ನಲ್ಲಿ ಇದುವರೆಗೂ 124ರ ಸ್ಟ್ರೈಕ್‌ರೇಟ್‌ನಲ್ಲಿ 2,375 ರನ್ ಬಾರಿಸಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಈ ಕೆಳಕಂಡ 3 ಫ್ರಾಂಚೈಸಿಗಳು ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿವೆ.
1. ಮುಂಬೈ ಇಂಡಿಯನ್ಸ್
ಮುಂಬೈನ ಲೋಕಲ್ ಹೀರೋ ಶ್ರೇಯಸ್ ಅಯ್ಯರ್ ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದರೆ ಅಚ್ಚರಿಯೇನಿಲ್ಲ. ಈಗಾಗಲೇ ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಪೊಲ್ಲಾರ್ಡ್, ಸೂರ್ಯಕುಮಾರ್ ಯಾದವ್ ಅವರಂತಹ ಟಿ20 ತಜ್ಞ ಬ್ಯಾಟರ್‌ಗಳಿದ್ದಾರೆ.
35 ವರ್ಷದ ರೋಹಿತ್ ಇನ್ನು ಮೂರ್ನಾಲ್ಕು ವರ್ಷಗಳ ಕಾಲ ಕ್ರಿಕೆಟ್ ಆಡಬಹುದು. ಉತ್ತಮ ನಾಯಕತ್ವ ಗುಣ ಹೊಂದಿರುವ ಅಯ್ಯರ್ ಅವರಿಗೆ ಈ ಬಾರಿ ಮಣೆ ಹಾಕುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಲೆಕ್ಕಾಚಾರದಲ್ಲಿದೆ ಮುಂಬೈ ಫ್ರಾಂಚೈಸಿ
2. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ. ಕೊಹ್ಲಿ ಈಗಾಗಲೇ ಆರ್‌ಸಿಬಿ ನಾಯಕತ್ವಕ್ಕೆ ಗುಡ್ ಬೈ ಹೇಳಿರುವುದರಿಂದ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಶ್ರೇಯಸ್ ಅಯ್ಯರ್‌ಗೆ ಗಾಳ ಹಾಕುವ ಸಾಧ್ಯತೆಯಿದೆ.
(photo Source- Instagram)
ಈಗಾಗಲೇ ಎಬಿ ಡಿವಿಲಿಯರ್ಸ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದರಿಂದ ಆರ್‌ಸಿಬಿ ತನ್ನ ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಕೊಹ್ಲಿ, ಮ್ಯಾಕ್ಸ್‌ವೆಲ್ ಜತೆಗೆ ಅಯ್ಯರ್ ಕೂಡಾ ಆರ್‌ಸಿಬಿ ತಂಡ ಕೂಡಿಕೊಂಡರೆ ಬೆಂಗಳೂರು ಮತ್ತಷ್ಟು ಬಲಾಢ್ಯವಾಗಲಿದೆ.
3. ಪಂಜಾಬ್ ಕಿಂಗ್ಸ್
ಆರ್‌ಸಿಬಿ ತಂಡದಂತೆ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಉತ್ತಮ ನಾಯಕನ ಹುಡುಕಾಟದಲ್ಲಿದೆ. ಕೆ.ಎಲ್. ರಾಹುಲ್ ಪಂಜಾಬ್ ತಂಡ ತೊರೆದಿರುವುದರಿಂದ, ಅಯ್ಯರ್ ಅವರನ್ನು ಸೆಳೆದುಕೊಂಡು ನಾಯಕ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ ಪಂಜಾಬ್ ಮೂಲದ ಫ್ರಾಂಚೈಸಿ.
ನಾಯಕನಾಗಿ ಈಗಾಗಲೇ ಸೈ ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡವನ್ನು ಕೂಡಿಕೊಂಡರೆ ಅಚ್ಚರಿ ಪಡುವಂತಿಲ್ಲ. ಏಕೆಂದರೆ ಪಂಜಾಬ್ ಫ್ರಾಂಚೈಸಿ ಕೇವಲ ಇಬ್ಬರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದ್ದು, ಹರಾಜಿಗೂ ಮುನ್ನ ತನ್ನ ಪರ್ಸ್‌ನಲ್ಲಿ ಸಾಕಷ್ಟು ಹಣವನ್ನು ಉಳಿಸಿಕೊಂಡಿದೆ.