ರನ್ ಮೆಷಿನ್ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ 12,500 ರನ್ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ ಈ ಮೈಲುಗಲ್ಲು ಸಾಧಿಸಿದರು. ಕೊಹ್ಲಿ 387 ಟಿ20 ಪಂದ್ಯಗಳನ್ನಾಡಿದ್ದು, 370 ಇನ್ನಿಂಗ್ಸ್‌ಗಳಲ್ಲಿ 12,536 ರನ್ ಕಲೆಹಾಕಿದ್ದಾರೆ. ಇದರಲ್ಲಿ 9 ಶತಕ, 95 ಅರ್ಧಶತಕಗಳೂ ಒಳಗೊಂಡಿವೆ.
ರೋಹಿತ್ ಶರ್ಮಾ ಟಿ20ಯಲ್ಲಿ 11,482 ರನ್ ಕಲೆಹಾಕಿದ್ದು, ಭಾರತೀಯ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಭಾರತೀಯರಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಾತ್ರ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ.
Image credit: Getty
ವಿರಾಟ್ ಕೊಹ್ಲಿ ಒಟ್ಟಾರೆ ಗರಿಷ್ಠ ಟಿ20 ರನ್ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ಇಂಡೀಸ್‌ನ ಕ್ರಿಸ್ ಗೇಲ್ 455 ಇನ್ನಿಂಗ್ಸ್‌ಗಳಲ್ಲಿ 14,562 ರನ್ ಕಲೆಹಾಕಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಇದ್ದಾರೆ.
ಪಾಕಿಸ್ತಾನದ ಶೋಯೆಬ್ ಮಲಿಕ್ 503 ಇನ್ನಿಂಗ್ಸ್‌ಗಳಲ್ಲಿ 13,360 ರನ್ ಗಳಿಸಿ 2ನೇ ಸ್ಥಾನ, ವೆಸ್ಟ್‌ಇಂಡೀಸ್‌ನ ಕೀರನ್ ಪೊಲ್ಲಾರ್ಡ್ 586 ಇನ್ನಿಂಗ್ಸ್‌ಗಳಲ್ಲಿ 12,900 ರನ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಇನ್ನು ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಹಿಂದಿಕ್ಕಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ 11 ಪಂದ್ಯಗಳನ್ನಾಡಿ 67.75ರ ಬ್ಯಾಟಿಂಗ್ ಸರಾಸರಿಯಲ್ಲಿ 542 ರನ್ ಸಿಡಿಸಿದ್ದಾರೆ. ಇನ್ನು ಋತುರಾಜ್ ಗಾಯಕ್ವಾಡ್ 10 ಪಂದ್ಯಗಳನ್ನಾಡಿ 509 ರನ್ ಬಾರಿಸಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.