ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಸಾಕಷ್ಟು ಅಳೆದು ತೂಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ರೋಹಿತ್ ಶರ್ಮಾಗೆ ನಾಯಕ ಪಟ್ಟ ಕಟ್ಟಲಾಗಿದೆ.
15 ಆಟಗಾರರ ತಂಡದಲ್ಲಿ ಅಚ್ಚರಿಯೆನ್ನುವಂತೆ ಕೆಲವು ಪ್ರತಿಭಾನ್ವಿತ ಆಟಗಾರರನ್ನು ಕೈಬಿಡಲಾಗಿದೆ. ಅದೇ ರೀತಿ ಫಾರ್ಮ್ ಇಲ್ಲದೇ ಇರುವ ಕೆಲವು ಆಟಗಾರರಿಗೆ ಆಯ್ಕೆ ಸಮಿತಿ ಮಣೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಜೂ.5ರಂದು ಐರ್ಲೆಂಡ್ ವಿರುದ್ಧ ಆಡಲಿದ್ದು, ಜೂ.9ರಂದು ನ್ಯೂಯಾರ್ಕ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಜೂ.12ರಂದು ಅಮೆರಿಕ, ಜೂ.15ರಂದು ಕೆನಡಾ ವಿರುದ್ಧ ಸೆಣಸಲಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್.
ಮೀಸಲು ಆಟಗಾರರು: ಶುಭ್‌ಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್, ಖಲೀಲ್ ಅಹ್ಮದ್.
ಅರ್ಧದಷ್ಟು ಆಟಗಾರರು ಫೇಲ್:
1. ಹಾರ್ದಿಕ್ ಪಾಂಡ್ಯ:
ವಿಶ್ವಕಪ್ ಟೂರ್ನಿಗೆ ಔಟ್ ಆಫ್ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯಗೆ ಮಣೆ ಹಾಕಲಾಗಿದೆ. ಇದಷ್ಟೇ ಅಲ್ಲದೇ ಉಪನಾಯಕ ಪಟ್ಟ ಬೇರೆ ಕಟ್ಟಲಾಗಿದೆ. ಲಖನೌ ಎದುರು ಶೂನ್ಯ ಸುತ್ತಿದ್ದ ಪಾಂಡ್ಯ, ಕೆಕೆಆರ್ ಎದುರು ಒಂದು ರನ್ ಗಳಿಸಿ ನಿರಾಸೆ ಅನುಭವಿಸಿದ್ದಾರೆ
2. ರೋಹಿತ್ ಶರ್ಮಾ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಇತ್ತೀಚೆಗೆ ಲಯ ಕಳೆದುಕೊಂಡಿದ್ದಾರೆ.ಲಖನೌ ಎದುರು 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಹಿಟ್‌ಮ್ಯಾನ್, ಕೆಕೆಆರ್ ಎದುರು ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹಿಟ್‌ಮ್ಯಾನ್ ಫಾರ್ಮ್ ಅಭಿಮಾನಿಗಳನ್ನು ಆತಂಕಕ್ಕೆ ಈಡು ಮಾಡಿದೆ.
3. ರವೀಂದ್ರ ಜಡೇಜಾ:
ಟೀಂ ಇಂಡಿಯಾ ಪ್ರೀಮಿಯರ್ ಆಲ್ರೌಂಡರ್ ರವೀಂದ್ರ ಜಡೇಜಾ ಫಾರ್ಮ್ ಕೂಡಾ ಉತ್ತಮವಾಗಿಲ್ಲ. ಪಂಜಾಬ್ ಎದುರು ಜಡ್ಡು ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಜಡ್ಡು ಆದಷ್ಟು ಬೇಗ ಫಾರ್ಮ್ ಕಂಡುಕೊಳ್ಳಬೇಕಿದೆ.
4. ಆರ್ಶದೀಪ್ ಸಿಂಗ್
ಪಂಜಾಬ್ ಕಿಂಗ್ಸ್ ತಂಡದ ಎಡಗೈ ವೇಗಿ ಆರ್ಶದೀಪ್ ಸಿಂಗ್, ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ಬೆನ್ನಲ್ಲೇ ಸಿಎಸ್‌ಕೆ ಎದುರು 4 ಓವರ್ ಬೌಲಿಂಗ್ ಮಾಡಿ 52 ರನ್ ಚಚ್ಚಿಸಿಕೊಳ್ಳುವ ಮೂಲಕ ದುಬಾರಿಯಾಗಿದ್ದರು.
5. ಸಂಜು ಸ್ಯಾಮ್ಸನ್:
ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, ಸನ್‌ರೈಸರ್ಸ್ ಹೈದರಾಬಾದ್ ಎದುರು ಮೂರು ಎಸೆತ ಎದುರಿಸಿ ಶೂನ್ಯ ಸುತ್ತಿದ್ದರು.
6. ಯುಜುವೇಂದ್ರ ಚಹಲ್:
ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ ಅಸ್ತ್ರ ಚಹಲ್, ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ಬೆನ್ನಲ್ಲೇ ಐಪಿಎಲ್‌ನಲ್ಲಿ ಅತಿ ದುಬಾರಿ ಸ್ಪೆಲ್ ಹಾಕಿದ್ದಾರೆ. ಸನ್‌ರೈಸರ್ಸ್ ಎದುರು ಚಹಲ್ 4 ಓವರ್ ಬೌಲಿಂಗ್ ಮಾಡಿ 62 ರನ್ ಚಚ್ಚಿಸಿಕೊಂಡಿದ್ದಾರೆ.
7. ಶಿವಂ ದುಬೆ:
ರಿಂಕು ಸಿಂಗ್ ಅವರನ್ನು ಹಿಂದಿಕ್ಕಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ಶಿವಂ ದುಬೆ ಪಂಜಾಬ್ ಎದುರು ಶೂನ್ಯ ಸಂಪಾದನೆ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ದುಬೆ ಒಂದು ವಿಕೆಟ್ ಕಬಳಿಸಿದ್ದರು.