ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾದ ಬಿಗಿ ಹಿಡಿತ ಮೂರನೇ ದಿನವೂ ಮುಂದುವರೆದಿದ್ದು, ಪ್ರವಾಸಿ ಶ್ರೀಲಂಕಾ ತಂಡವು ಇನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದೆ.
ರವೀಂದ್ರ ಜಡೇಜಾ ಬಾರಿಸಿದ ಅಜೇಯ ಶತಕ, ಹನುಮ ವಿಹಾರಿ, ರಿಷಭ್ ಪಂತ್ ಹಾಗೂ ರವಿಚಂದ್ರನ್ ಅಶ್ವಿನ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 574 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ ಕೇವಲ 174 ರನ್‌ಗಳಿಗೆ ಆಲೌಟ್ ಆಯಿತು. ಬರೋಬ್ಬರಿ 400 ರನ್‌ಗಳ ಮುನ್ನಡೆ ಪಡೆದ ಟೀಂ ಇಂಡಿಯಾ ಪ್ರವಾಸಿ ಲಂಕಾ ಮೇಲೆ ಫಾಲೋ ಆನ್ ಹೇರಿದೆ.
ಹೀಗಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶಾಕ್ ನೀಡಿದ್ದು, ಆರಂಭಿಕ ಬ್ಯಾಟರ್ ಲಹಿರು ತಿರುಮನ್ನೆ ಹಾಗೂ ಪಥುಮ್ ನಿಸ್ಸಾಂಕ ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 434 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಕಪಿಲ್ ದೇವ್ ಜತೆ ರವಿಚಂದ್ರನ್ ಅಶ್ವಿನ್ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ಭಾರತ ಪರ 131 ಟೆಸ್ಟ್ ಪಂದ್ಯವನ್ನಾಡಿ 434 ವಿಕೆಟ್ ಕಬಳಿಸಿದ್ದರು. ಇದೀಗ ತಮಿಳುನಾಡು ಮೂಲದ ರವಿಚಂದ್ರನ್ ಅಶ್ವಿನ್ ಕೇವಲ 85ನೇ ಟೆಸ್ಟ್ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದಾರೆ.
ಇನ್ನು ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಅನಿಲ್ ಕುಂಬ್ಳೆ ಭಾರತ ಪರ 132 ಟೆಸ್ಟ್ ಪಂದ್ಯಗಳನ್ನಾಡಿ 619 ವಿಕೆಟ್ ಕಬಳಿಸುವ ಮೂಲಕ ಭಾರತ ಗರಿಷ್ಠ ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ.