Image Credit: Getty Images
ಸ್ಪಿನ್ ದಿಗ್ಗಜ ಶೇನ್ ವಾರ್ನ್ ಥಾಯ್ಲೆಂಡ್‌ನ ವಿಲ್ಲಾದಲ್ಲಿ ದಿಢೀರ್ ಎನ್ನುವಂತೆ ಮಾರ್ಚ್ 5ರಂದು ಕೊನೆಯುಸಿರೆಳೆದಿದ್ದರು. ಶುಕ್ರವಾರ ಬೆಳಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಾಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿದ್ದ ವಾರ್ನ್, ಸಂಜೆ ವೇಳೆಗೆ ಅವರೇ ಕೊನೆಯುಸಿರೆಳೆದಿದ್ದರು.
ಯಾವುದೇ ಸಣ್ಣ ಸುಳಿವು ಇಲ್ಲದೇ ವಾರ್ನ್ ನಿಧನರಾದ ಬಗ್ಗೆ ಹಲವು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರ ನಿಧನದ ಕುರಿತಂತೆ ತನಿಖೆ ನಡೆಸಿದ ಥಾಯ್ಲೆಂಡ್ ಪೊಲೀಸರು, ಸರಿಯಾದ ಮಾಹಿತಿ ಹೊರಗೆಡವಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್, ಆಸ್ಪ್ರೇಲಿಯಾದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಸಾವಿನಲ್ಲಿ ಯಾವುದೇ ಶಂಕೆಗಳಿಲ್ಲ. ಹಿಂಸಾಕೃತ್ಯದಿಂದ ಸಾವು ಸಂಭವಿಸಿಲ್ಲ’ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಹಿಂಸಾಕೃತ್ಯ ಸಂಭವಿಸಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಅವರು ಹೃದಯಾಘಾತದಿಂದಲೇ ಕೊನೆಯುಸಿರೆಳೆದಿದ್ದಾರೆಂದು ಪೊಲೀಸ್ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಶೇನ್ ವಾರ್ನ್ ಈ ಹಿಂದೆ ಅಸ್ತಮಾ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ವಾರ್ನ್ ಕೊನೆಯುಸಿರೆಳೆಯುವ ಮುನ್ನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.
ಇನ್ನು, ಶೇನ್ ವಾರ್ನ್ ತಮ್ಮ ಸಾವಿಗೂ ಮುನ್ನ ಪಾಕಿಸ್ತಾನ-ಆಸ್ಪ್ರೇಲಿಯಾ ಪಂದ್ಯ ವೀಕ್ಷಿಸುತ್ತಿದ್ದರು. 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸ ಮಾಡಿದೆ. ಇನ್ನು ಅವರು ಮಧ್ಯಪಾನ ಮಾಡುತ್ತಿರಲಿಲ್ಲ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದೆ.
ಶೇನ್ ವಾರ್ನ್ ಸ್ಮರಣಾರ್ಥ ಮೆಲ್ಬರ್ನ್ ಕ್ರೀಡಾಂಗಣದ ಸ್ಟಾಂಡ್‌ಗೆ ಅವರ ಹೆಸರಿಡಲು ಕ್ರಿಕೆಟ್ ಆಸ್ಪ್ರೇಲಿಯಾ ನಿರ್ಧರಿಸಿದ್ದು, ವಾರ್ನ್ ಅಂತ್ಯಕ್ರಿಯೆಯನ್ನು ವಿಕ್ಟೋರಿಯಾ ರಾಜ್ಯ ಸರ್ಕಾರದಿಂದ ನೆರವೇರಿಸಲಾಗುವುದು ಎಂದು ಪ್ರಧಾನಿ ಸ್ಕಾಟ್ ಮೋರಿಸನ್ ತಿಳಿಸಿದ್ದಾರೆ.
ಆಸ್ಪ್ರೇಲಿಯಾ ಪರ 15 ವರ್ಷಗಳ ಕಾಲ 145 ಟೆಸ್ಟ್‌ಗಳನ್ನು ಆಡಿದ್ದ ವಾರ್ನ್ ಬರೋಬ್ಬರಿ 708 ವಿಕೆಟ್‌ಗಳನ್ನು ಕಬಳಿಸಿದ್ದರು. ಒಟ್ಟು 301 ಪ್ರಥಮ ದರ್ಜೆ ಪಂದ್ಯಗಳಲ್ಲಿ 1319 ವಿಕೆಟ್ ಉರುಳಿಸಿದ ಖ್ಯಾತಿ ಅವರದ್ದು.