Nagpur Test: ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ, ಸೂರ್ಯನಿಗೆ ಸಿಗುತ್ತಾ ಸ್ಥಾನ?

First Published Feb 8, 2023, 1:15 PM IST

ನಾಗ್ಪುರ(ಫೆ.08): ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 09ರಂದು ನಾಗ್ಪುರದಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಸ್ಪಿನ್‌ ಸ್ನೇಹಿ ಪಿಚ್‌ ಎನಿಸಿಕೊಂಡಿರುವ ನಾಗ್ಪುರದಲ್ಲಿ ಸಕಲ ರಣತಂತ್ರದೊಂದಿಗೆ ಕಣಕ್ಕಿಳಿಯಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ. ಮೊದಲ ಟೆಸ್ಟ್‌ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.
 

1. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ 30ನೇ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದು, ಇದೀಗ ರೆಡ್‌ ಬಾಲ್ ಕ್ರಿಕೆಟ್‌ನಲ್ಲೂ ರನ್‌ ಮಳೆ ಹರಿಸಲು ಹಿಟ್‌ಮ್ಯಾನ್ ಸಜ್ಜಾಗಿದ್ದಾರೆ.
 

2. ಕೆ ಎಲ್ ರಾಹುಲ್: ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಸ್ಥಾನ ಪಡೆಯಲು ಶುಭ್‌ಮನ್ ಗಿಲ್ ಹಾಗೂ ಇಶಾನ್ ಕಿಶನ್‌ ನಡುವೆ ಭಾರೀ ಪೈಪೋಟಿ ಇರುವುದರಿಂದ ಕೆ ಎಲ್ ರಾಹುಲ್, ಇದೀಗ ಟೆಸ್ಟ್‌ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಂತ ಪ್ರದರ್ಶನ ತೋರಬೇಕಾದ ಒತ್ತಡಕ್ಕೆ ಸಿಲುಕಿದೆ.

3. ಚೇತೇಶ್ವರ್ ಪೂಜಾರ: ಟೀಂ ಇಂಡಿಯಾದ ನಂಬಿಗಸ್ಥ ಬ್ಯಾಟರ್‌ ಚೇತೇಶ್ವರ್ ಪೂಜಾರ, ಕೂಡಾ ಭರ್ಜರಿ ಫಾರ್ಮ್‌ನಲ್ಲಿದ್ದು, ಆಸ್ಟ್ರೇಲಿಯಾ ಎದುರು ತನ್ನದೇ ಆದ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದ್ದಾರೆ. ತವರಿನಲ್ಲಿ ಆಸೀಸ್‌ ಬೌಲರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
 

4. ವಿರಾಟ್ ಕೊಹ್ಲಿ: ಈಗಾಗಲೇ ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಶತಕದ ಭರ ನೀಗಿಸಿಕೊಂಡಿರುವ ವಿರಾಟ್ ಕೊಹ್ಲಿ, ಇದೀಗ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
 

5. ಸೂರ್ಯಕುಮಾರ್ ಯಾದವ್: ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

6.  ಕೆ ಎಸ್ ಭರತ್: ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಿಷಭ್‌ ಪಂತ್ ಅಲಭ್ಯರಾಗಿದ್ದಾರೆ. ಹೀಗಾಗಿ ವಿಕೆಟ್‌ ಕೀಪರ್ ಸ್ಥಾನಕ್ಕಾಗಿ ಕೆ ಎಸ್ ಭರತ್ ಹಾಗೂ ಇಶಾನ್ ಕಿಶನ್ ನಡುವೆ ಭಾರೀ ಪೈಪೋಟಿಯಿದ್ದು, ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಭರತ್, ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

7. ರವೀಂದ್ರ ಜಡೇಜಾ: ಟೀಂ ಇಂಡಿಯಾ ಸ್ಪಿನ್‌ ಆಲ್ರೌಂಡರ್‌ ಜಡೇಜಾ, ಇತ್ತೀಚೆಗಷ್ಟೇ ರಣಜಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಆಸೀಸ್ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲೇ ಮಿಂಚಲು ಸಜ್ಜಾಗಿದ್ದಾರೆ.

8. ರವಿಚಂದ್ರನ್ ಅಶ್ವಿನ್‌: ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸದ್ಯ ಆಸೀಸ್‌ ತಲೆನೋವು ಹೆಚ್ಚುವಂತೆ ಮಾಡಿದ್ದಾರೆ. ಈಗಾಗಲೇ ಆಸೀಸ್‌ ಎದುರು ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತು ಮಾಡಿರುವ ಅಶ್ವಿನ್, ಅಗತ್ಯಬಿದ್ದರೇ ಬ್ಯಾಟಿಂಗ್‌ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ 

kuldeep

9. ಕುಲ್ದೀಪ್ ಯಾದವ್: ತವರಿನಲ್ಲಿ ಅಕ್ಷರ್ ಪಟೇಲ್ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದರೂ ಸಹಾ, ಜಡೇಜಾ ಹಾಗೂ ಅಕ್ಷರ್ ಪಟೇಲ್ ಒಂದೇ ಶೈಲಿಯಲ್ಲಿ ಬೌಲಿಂಗ್ ಮಾಡುವುದರಿಂದ ಕುಲ್ದೀಪ್‌ಗೆ ಸ್ಥಾನ ದೊರೆಯುವ ಸಾಧ್ಯತೆಯಿದೆ.

10. ಮೊಹಮ್ಮದ್ ಸಿರಾಜ್: ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಬೌಲರ್‌ ಆಗಿರುವ ಹೈದರಾಬಾದ್ ಮೂಲದ ವೇಗಿ ಸಿರಾಜ್, ಹೊಸ ಚೆಂಡಿನಲ್ಲೇ ಮಾರಕ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ.
 

11. ಮೊಹಮ್ಮದ್‌ ಶಮಿ: ಅನುಭವಿ ವೇಗಿ ಮೊಹಮ್ಮದ್ ಶಮಿ, ಸಾಕಷ್ಟು ಬಿಡುವಿನ ಬಳಿಕ ತಂಡವನ್ನು ಕೂಡಿಕೊಂಡಿದ್ದು, ವೇಗದ ಬೌಲಿಂಗ್ ಸಾರಥ್ಯವನ್ನು ವಹಿಸಲಿದ್ದಾರೆ. ಶಮಿ ಅನುಭವ ತಂಡಕ್ಕೆ ಆಸರೆಯಾಗಲಿದೆ.

click me!