ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತಂತೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಅಧಿಕೃತ ಪ್ರಕಟಣೆ ಮಾಡಿದೆ.
2018ರಿಂದಲೂ ಮಯಾಂಕ್ ಅಗರ್‌ವಾಲ್ ಪಂಜಾಬ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಪಂಜಾಬ್ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಮಯಾಂಕ್ ಅಗರ್‌ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು.
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಯುವ ವೇಗಿ ಆರ್ಶದೀಪ್ ಸಿಂಗ್ ಅವರನ್ನು 4 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು.
ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ, ಕೆ.ಎಲ್. ರಾಹುಲ್ ತಂಡವನ್ನು ತೊರೆದಿದ್ದರು. ಹೀಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿತ್ತು.
ಈ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಇದೀಗ ತಂಡವನ್ನು ಮುನ್ನಡೆಸಲು ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಈ ಜವಾಬ್ದಾರಿಯನ್ನು ನಾನು ಅತ್ಯಂತ ವಿನೀತನಾಗಿ ಸ್ವೀಕರಿಸುತ್ತಿದ್ದೇನೆ. ಇದರ ಜತೆಗೆ ಈ ಬಾರಿಯ ಪಂಜಾಬ್ ತಂಡದಲ್ಲಿ ಸಾಕಷ್ಟು ಯುವ ಹಾಗೂ ಅನುಭವಿ ಪ್ರತಿಭಾನ್ವಿತ ಆಟಗಾರರಿದ್ದು, ಇವರೆಲ್ಲರೂ ನನ್ನ ಕೆಲಸವನ್ನು ಸುಲಭಗೊಳಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಮಯಾಂಕ್ ಹೇಳಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಮೇ29ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿದ್ದು, ಲೀಗ್ ಹಂತದ ಪಂದ್ಯಗಳಿಗೆ ಮುಂಬೈ ಹಾಗೂ ಪುಣೆಯ ನಾಲ್ಕು ಮೈದಾನಗಳು ಆತಿಥ್ಯವನ್ನು ವಹಿಸಲಿವೆ.
2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಲೀಗ್ ಹಂತದಲ್ಲೇ 70 ಪಂದ್ಯಗಳು ನಡೆಯಲಿವೆ. ಇನ್ನು ಪ್ಲೇ ಆಫ್ ಪಂದ್ಯಗಳು ಎಲ್ಲಿ ನಡೆಯಲಿವೆ ಎನ್ನುವ ಗುಟ್ಟನ್ನು ಬಿಸಿಸಿಐ ಇದುವರೆಗೂ ಬಿಟ್ಟುಕೊಟ್ಟಿಲ್ಲ.