ಭಾರತ ಹಾಗೂ ಇಂಗ್ಲೆಂಡ್ ನಡುವೆ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಕೆಚ್ಚೆದೆಯ ಶತಕದ ಹೊರತಾಗಿಯೂ ಟೀಂ ಇಂಡಿಯಾ 17 ರನ್‌ಗಳ ಅಂತರದ ರೋಚಕ ಸೋಲು ಅನುಭವಿಸಿದೆ.
ಬೌಲರ್‌ಗಳು ಹಾಗೂ ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಇಂಗ್ಲೆಂಡ್ ಎದುರು ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡುವ ಅವಕಾಶವನ್ನು ರೋಹಿತ್ ಶರ್ಮಾ ಪಡೆ ಕೈಚೆಲ್ಲಿದೆ. 216 ರನ್‌ಗಳ ಗುರಿ ಬೆನ್ನತ್ತಿದ ಭಾರತ 198 ರನ್ ಗಳಿಸಲಷ್ಟೇ ಶಕ್ತವಾಯಿತು.
Image credit: Getty
ಇನ್ನು ಕಳೆದ ಮೂರು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗುತ್ತಾ ಬಂದಿರುವ ವಿರಾಟ್ ಕೊಹ್ಲಿ, ಇದೀಗ ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಒಂದು ರನ್ ಹಾಗೂ ಮೂರನೇ ಟಿ20 ಪಂದ್ಯದಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ.
ವಿರಾಟ್ ಕೊಹ್ಲಿಯ ದಯನೀಯ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕ್ರಿಕೆಟ್ ಪಂಡಿತರು ಕಟು ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ. ಕಪಿಲ್ ದೇವ್, ಅಜಯ್ ಜಡೇಜಾ ಸೇರಿದಂತೆ ಹಲವು ಕ್ರಿಕೆಟಿಗರು ಕೊಹ್ಲಿ ಪ್ರದರ್ಶನದ ಬಗ್ಗೆ ಕಿಡಿ ಕಾರಿದ್ದಾರೆ.
Kohli Rohit
ಇದೆಲ್ಲದರ ನಡುವೆ, ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಕೊಹ್ಲಿ ಸಾಮರ್ಥ್ಯದ ಬಗ್ಗೆ ತಮಗೆ ವಿಶ್ವಾಸವಿದೆ ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ.
Virat Kohli Rohit Sharma
ನಾವು ವಿರಾಟ್ ಕೊಹ್ಲಿ ಜತೆಗಿದ್ದೇವೆ. ಅವರು ದೀರ್ಘಕಾಲದಿಂದಲೂ ಸ್ಥಿರ ಪ್ರದರ್ಶನ ತೋರಿದ್ದಾರೆ. ಎಲ್ಲರೂ ಒಂದೆರಡು ಪಂದ್ಯ ಅಥವಾ ಒಂದೆರಡು ಸರಣಿಯಲ್ಲಿ ಕೆಟ್ಟ ಪ್ರದರ್ಶನ ತೋರುತ್ತಾರೆ. ನಮಗೆ ವಿರಾಟ್ ಕೊಹ್ಲಿಯವರ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆಟಗಾರರ ಸ್ಥಾನದ ಕುರಿತಂತೆ ಯಾವ ತಜ್ಞರು ಹೀಗೆಲ್ಲಾ ಮಾತನಾಡುತ್ತಾರೋ ನನಗಂತೂ ಗೊತ್ತಿಲ್ಲ. ನಾವು ಆಟಗಾರರ ಸಾಮರ್ಥ್ಯವನ್ನು ನೋಡಿಯೇ ಅವರನ್ನು ಬೆಂಬಲಿಸುತ್ತೇವೆ. ಒಂದು ದಶಕದವರೆಗೂ ಅದ್ಭುತ ಪ್ರದರ್ಶನ ತೋರಿದ ಆಟಗಾರನ ಬಗ್ಗೆ ಕೆಲ ವರ್ಷದಲ್ಲಿನ ಪ್ರದರ್ಶನ ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬಾರದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Virat Kohli Rohit Sharma
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 12ರಿಂದ ಆರಂಭವಾಗಲಿದೆ. ಏಕದಿನ ಸರಣಿಯಲ್ಲಾದರೂ ವಿರಾಟ್ ಕೊಹ್ಲಿ, ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.