ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉಗಾಂಡ ತಂಡವು ಚೊಚ್ಚಲ ಗೆಲುವು ದಾಖಲಿಸಿದೆ. ಪಪುವಾ ನ್ಯೂ ಗಿನಿ ಎದುರಿನ ಪಂದ್ಯದಲ್ಲಿ ಉಗಾಂಡ ತಂಡವು ಸುಲಭ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಉಗಾಂಡ ತಂಡವು ಮಾರಕ ದಾಳಿ ನಡೆಸುವ ಮೂಲಕ ಪಪುವಾ ನ್ಯೂ ಗಿನಿ ತಂಡವನ್ನು ಕೇವಲ 77 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಇದಾದ ಬಳಿಕ ಸುಲಭ ಗುರಿ ಬೆನ್ನತ್ತಿದ ಉಗಾಂಡ ಕ್ರಿಕೆಟ್ ತಂಡವು 7 ವಿಕೆಟ್ ಕಳೆದುಕೊಂಡು ಇನ್ನೂ 10 ಎಸೆತ ಬಾಕಿ ಇರುವಂತೆಯೇ ಸ್ಮರಣೀಯ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಗಾಂಡ ಮೊದಲ ಗೆಲುವು ದಾಖಲಿಸಿ ಸ್ಮರಣೀಯವಾಗಿಸಿಕೊಂಡಿದ್ದು ಮಾತ್ರವಲ್ಲದೇ, ತಂಡದ 43 ವರ್ಷದ ಆಫ್‌ಸ್ಪಿನ್ನರ್ ಫ್ರಾಂಕ್ ನುಬುಗಾ, ಟಿ20 ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಅನುಭವಿ ಆಫ್‌ಸ್ಪಿನ್ನರ್ ಫ್ರಾಂಕ್ ನುಬುಗಾ, ಇದುವರೆಗೂ ನಡೆದ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಶಿಸ್ತುಬದ್ದ ಸ್ಪೆಲ್(ಮೋಸ್ಟ್ ಎಕನಮಿಕಲ್ ಸ್ಪೆಲ್) ಮಾಡಿ ಹೊಸ ದಾಖಲೆ ಬರೆದಿದ್ದಾರೆ.
ಪಪುವಾ ನ್ಯೂ ಗಿನಿ ಎದುರು ಉಗಾಂಡ ಆಫ್‌ಸ್ಪಿನ್ನರ್ ಫ್ರಾಂಕ್ ನುಬುಗಾ, 4 ಓವರ್ ಬೌಲಿಂಗ್ ಮಾಡಿ ಎರಡು ಮೇಡನ್ ಓವರ್ ಸಹಿತ ಕೇವಲ 4 ರನ್ ನೀಡಿ 2 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತ್ಯಂತ ಎಕನಮಿಕಲ್ ಸ್ಪೆಲ್ ಎಸೆದ ದಾಖಲೆ ದಕ್ಷಿಣ ಆಫ್ರಿಕಾ ವೇಗಿ ಏನ್ರಿಚ್ ನೋಕಿಯ ಹೆಸರಿನಲ್ಲಿದೆ. ಇದೇ ವಿಶ್ವಕಪ್‌ನಲ್ಲಿ ನೋಕಿಯ ಲಂಕಾ ಎದುರು ಕೇವಲ 7 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.