ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ, ಸೂಪರ್ ಹಂತದ ಗ್ರೂಪ್ 2 ವಿಭಾಗದಲ್ಲಿ 4 ಗೆಲುವು ಹಾಗೂ 1 ಸೋಲಿನೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್ ಪ್ರವೇಶಿಸಿತ್ತು..
ಆದರೆ ಸೆಮಿಫೈನಲ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಆಘಾತಕಾರಿ ಸೋಲು ಅನುಭವಿಸುವ ಮೂಲಕ ಹೋರಾಟ ಮುಗಿಸಿದೆ.
ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಒಟ್ಟು 5,600,000 ಯುಎಸ್ ಡಾಲರ್ ಅಥವಾ ಭಾರತೀಯ ರುಪಾಯಿ ಮೌಲ್ಯದಲ್ಲಿ ಸುಮಾರು 45 ಕೋಟಿ ರುಪಾಯಿ ಬಹುಮಾನ ಮೊತ್ತವನ್ನು ನಿಗದಿ ಪಡಿಸಲಾಗಿದೆ.
ಇದೀಗ ಸೆಮಿಫೈನಲ್‌ನಲ್ಲಿ ಸೋತ ಟೀಂ ಇಂಡಿಯಾ ಸುಮಾರು 3.22 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಇದಷ್ಟೇ ಅಲ್ಲದೇ ಸೂಪರ್ 12 ಹಂತದಲ್ಲಿನ 4 ಪಂದ್ಯಗಳ ಗೆಲುವಿನಿಂದ ಒಟ್ಟಾರೆ 1.28 ಕೋಟಿ ರುಪಾಯಿಗಳನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ 4.50 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಒಂದು ವೇಳೆ ಟೀಂ ಇಂಡಿಯಾ, ಈ ಬಾರಿ ಫೈನಲ್ ಪ್ರವೇಶಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೇ, ಈಗ ಗಳಿಸಿಕೊಂಡ ಬಹುಮಾನದ ಮೂರು ಪಟ್ಟು ಅಂದರೆ ಸುಮಾರು 12.88 ಕೋಟಿ ರುಪಾಯಿಗಳನ್ನು ಟೀಂ ಇಂಡಿಯಾ ತನ್ನದಾಗಿಸಿಕೊಳ್ಳುವ ಅವಕಾಶವಿತ್ತು.
ಇದೀಗ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ಪೈಕಿ ಒಂದು ತಂಡವು ಚಾಂಪಿಯನ್ ಆಗಲಿದ್ದು, ರನ್ನರ್ ಅಪ್ ಸ್ಥಾನ ಪಡೆಯುವ ತಂಡವು ಸುಮಾರು 6.44 ಕೋಟಿ ರುಪಾಯಿಗಳನ್ನು ತನ್ನದಾಗಿಸಿಕೊಳ್ಳಲಿದೆ.
ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಪ್ರಶಸ್ತಿಗಾಗಿ ಸೆಣಸಾಡಲಿವೆ. ಒಂದು ವೇಳೆ ಫೈನಲ್ ಪಂದ್ಯವು ಮಳೆಯಿಂದ ರದ್ದಾದರೇ ಎರಡೂ ತಂಡಗಳು ಜಂಟಿ ಚಾಂಪಿಯನ್‌ಗಳೆಂದು ಐಸಿಸಿ ಘೋಷಿಸಲಿದ್ದು, ಉಭಯ ತಂಡಗಳು ತಲಾ ಅಂದಾಜು 9.5 ಕೋಟಿ ರುಪಾಯಿಗಳನ್ನು ಪಡೆಯಲಿವೆ.