T20 World Cup ಟೂರ್ನಿಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..!

First Published Oct 13, 2021, 3:53 PM IST

ನವದೆಹಲಿ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup)ಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 17ರಿಂದ ಚುಟುಕು ಕ್ರಿಕೆಟ್ (Cricket) ಮಹಾ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಹೀಗಿರುವಾಗಲೇ ಜಾಗತಿಕ ಚುಟುಕು ಕ್ರಿಕೆಟ್‌ ಹಬ್ಬಕ್ಕೆ ಭಾರತ ಕ್ರಿಕೆಟ್‌ ತಂಡ (Team India Jersey) ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಿದೆ ನೋಡಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ (Virat Kohli) ಪಡೆಯ ನೂತನ ಜೆರ್ಸಿ

T20 World Cup

ಈಗಾಗಲೇ ಜಗತ್ತಿನಾದ್ಯಂತ ಐಸಿಸಿ ಟಿ20 ವಿಶ್ವಕಪ್ ಜ್ವರ ಕಾವೇರ ತೊಡಗಿದೆ. ಬರೋಬ್ಬರಿ 5 ವರ್ಷಗಳ ಬಳಿಕ ಇದೇ ಅಕ್ಟೋಬರ್ 17ರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಯುಎಇ ಹಾಗೂ ಓಮನ್‌ನಲ್ಲಿ ಪಂದ್ಯಾವಳಿಗಳು ನಡೆಯಲಿವೆ.

2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಟೀಂ ಇಂಡಿಯಾ ಪಾಲ್ಗೊಳ್ಳುತ್ತಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

ಇದೀಗ 7ನೇ ಬಾರಿಗೆ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2ನೇ ಬಾರಿಗೆ ಭಾರತಕ್ಕೆ ಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿದೆ.

ಸಂಪ್ರದಾಯವೆನ್ನುವಂತೆ ಪ್ರತಿ ತಂಡ ಪ್ರತಿಷ್ಠಿತ ಟೂರ್ನಿಗೆ ನೂತನ ಜೆರ್ಸಿಯೊಂದಿಗೆ ಕಣಕ್ಕಿಳಿಯುವುದು ವಾಡಿಕೆ. ಅದೇ ರೀತಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ.

Team India Jersey

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಅಕೌಂಟ್ ಮೂಲಕ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ ಮಾಡಿದೆ. ಟೀಂ ಇಂಡಿಯಾ ಜೆರ್ಸಿ ನೋಡಲು ಕಡು ನೀಲಿ ಮಿಶ್ರಿತವಾಗಿದ್ದು, ಇನ್ನುಳಿದಂತೆ ಮೊದಲಿನ ಜೆರ್ಸಿ ಶೈಲಿಯನ್ನು ಉಳಿಸಿಕೊಳ್ಳಲಾಗಿದೆ. 
 

ಈ ಕುರಿತಂತೆ ಟ್ವೀಟ್‌ ಮಾಡಿರುವ ಬಿಸಿಸಿಐ, ಕೋಟ್ಯಾಂತರ ಅಭಿಮಾನಿಗಳ ಚೀಯರ್ಸ್‌ನಿಂದ ಪ್ರೇರೇಪಿತಗೊಂಡ ಜೆರ್ಸಿ ನಿರ್ಮಿಸಿರುವುದಾಗಿ ತಿಳಿಸಿದೆ. ಅದಕ್ಕೆ Presenting the Billion Cheers Jersey! ಎಂದು ಟ್ವೀಟ್ ಮಾಡಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾದರೂ, ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ.
 

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ಗ್ರೂಪ್‌ 2ನಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್, ಆಫ್ಘಾನಿಸ್ತಾನ ಜತೆಗೆ ಇನ್ನೆರಡು ಅರ್ಹತಾ ಸುತ್ತಿನ ವಿಜೇತ ತಂಡಗಳು ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

click me!