ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ಮೊದಲ ಬಾರಿಗೆ 2021ರ ಐಪಿಎಲ್ ಟೂರ್ನಿಯ ವೇಳೆ ಆಡುವ ಹನ್ನೊಂದರ ಬಳಗದಿಂದ ಕೈಬಿಡುವ ಕಠಿಣ ನಿರ್ಧಾರ ತೆಗೆದುಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಮಹತ್ವದ ಪಂದ್ಯದಲ್ಲಿ ಸುರೇಶ್ ರೈನಾ ಅವರನ್ನು ಕೈಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯುವ ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಯಿತು.
ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ರಾಬಿನ್ ಉತ್ತಪ್ಪ ಯಶಸ್ವಿಯಾದರು. ಹೀಗಾಗಿ ಇದಾದ ಬಳಿಕ ಸುರೇಶ್ ರೈನಾಗೆ ಐಪಿಎಲ್‌ನಲ್ಲಿ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ.
2021ರ ಐಪಿಎಲ್ ಟೂರ್ನಿಗೂ ಮುನ್ನ ರಾಬಿನ್ ಉತ್ತಪ್ಪ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯಿಂದ ಟ್ರೇಡ್ ಮಾಡಿತ್ತು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದ ಟಾಸ್ ವೇಳೆ, ಸುರೇಶ್ ರೈನಾ ಗಾಯಗೊಂಡಿದ್ದು, ಅವರ ಬದಲಿಗೆ ರಾಬಿನ್ ಉತ್ತಪ್ಪ ತಂಡ ಕೂಡಿಕೊಂಡಿದ್ದಾರೆ ಎಂದು ಧೋನಿ ವಿವರಿಸಿದ್ದರು.
ಇದೀಗ ಕನ್ನಡಿಗ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರ ಹಿಂದೆ ತಮ್ಮ ಕೈವಾಡದ ಕುರಿತಂತೆ ಉತ್ತಪ್ಪ ಎದುರು ಸುರೇಶ್ ರೈನಾ ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ.
ನಾನು & ಧೋನಿ ಮಾತನಾಡುವ ವೇಳೆ, ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ ಅವರನ್ನು ಟ್ರೈ ಮಾಡು ಎಂದು ನಾನೇ ಧೋನಿಗೆ ಹೇಳಿದ್ದೆ. ನನ್ನ ಬದಲಿಗೆ ಉತ್ತಪ್ಪರನ್ನು ಆಡಿಸಲು ನಾನೇ ಧೋನಿಗೆ ಅನುಮತಿ ನೀಡಿದ್ದೆ.
ಆಗ ನಾನೇ ಧೋನಿಗೆ ಹೇಳಿದ್ದೆ, ನನ್ನನ್ನು ನಂಬು, ಉತ್ತಪ್ಪ ನಮ್ಮನ್ನು ಖಂಡಿತವಾಗಿಯೂ ಫೈನಲ್‌ಗೆ ನಮ್ಮ ತಂಡವನ್ನು ಕೊಂಡೊಯ್ಯುತ್ತಾನೆ ಎಂದು ಹೇಳಿದ್ದೆ ಎಂದು ಜಿಯೋಸಿನಿಮಾ ವೇದಿಕೆಯಲ್ಲಿ ಇಂಟ್ರೆಸ್ಟಿಂಗ್ ಮಾಹಿತಿಯನ್ನು ರೈನಾ ಬಿಚ್ಚಿಟ್ಟಿದ್ದಾರೆ.
ಆಗ ನಾನು, ಮೂರನೇ ಕ್ರಮಾಂಕದಲ್ಲಿ ಉತ್ತಪ್ಪ ಅವರನ್ನು ಆಡಿಸಿ. ಫೈನಲ್‌ವರೆಗೂ ಉತ್ತಪ್ಪ ಆಡಲಿ. ನೀವು ಗೆದ್ದರೆ, ಚೆನ್ನೈ ಗೆದ್ದಂತೆ. ನಾನು ಆಡಲಿ ಅಥವಾ ಉತ್ತಪ್ಪ ಆಡಲಿ. ತಂಡದ ಗೆಲುವಷ್ಟೇ ಮುಖ್ಯ ಎಂದು ನಾನೇ ಧೋನಿಗೆ ಹೇಳಿದ್ದೆ ಎಂದು ರೈನಾ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
2021ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ 4 ಪಂದ್ಯಗಳನ್ನಾಡಿದ ಉತ್ತಪ್ಪ 136.90 ಸ್ಟ್ರೈಕ್‌ರೇಟ್‌ನಲ್ಲಿ 115 ರನ್ ಬಾರಿಸಿದ್ದರು. 2021ರ ಐಪಿಎಲ್‌ನಲ್ಲಿ ಚೆನ್ನೈ ತಂಡವು ಫೈನಲ್‌ನಲ್ಲಿ ಕೆಕೆಆರ್ ಎದುರು 27 ರನ್ ಅಂತರದ ಗೆಲುವು ಸಾಧಿಸಿ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.