RCB ತೊರೆದ ಬಳಿಕ ಐಪಿಎಲ್ ಕಪ್ ಗೆದ್ದ ಕ್ರಿಕೆಟಿಗರಿವರು..!

First Published Apr 15, 2024, 5:24 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ಸೀಸನ್‌ಗಳಿಂದಲೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರೂ ಕಪ್‌ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿ, ಆ ಬಳಿಕ ಬೆಂಗಳೂರು ತಂಡವನ್ನು ತೊರೆದು ಬೇರೆ ತಂಡ ಸೇರಿ ಕಪ್ ಗೆದ್ದ ಹಲವು ಆಟಗಾರರ ಪರಿಚಯವನ್ನು ನಾವಿಂದು ಮಾಡಿಕೊಡುತ್ತಿದ್ದೇವೆ ನೋಡಿ.
 

1. ಶೇನ್ ವಾಟ್ಸನ್:

2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು 9.5 ಕೋಟಿ ರುಪಾಯಿ ನೀಡಿ ಶೇನ್ ವಾಟ್ಸನ್ ಅವರನ್ನು ಖರೀದಿಸಿತ್ತು. ಆದರೆ 2018ರ ಐಪಿಎಲ್‌ಗೂ ಮುನ್ನ ವಾಟ್ಸನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ರಿಲೀಸ್ ಮಾಡಿತು, ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಂಡ ವಾಟ್ಸನ್, ಯೆಲ್ಲೋ ಆರ್ಮಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2. ಜಾಕ್ ಕಾಲಿಸ್:

ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾಕ್ ಕಾಲಿಸ್, ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದ ಮೊದಲ ಮೂರು ಸೀಸನ್‌ ಆಡಿದ್ದರು. ಆದರೆ 2011ರ ಆರ್‌ಸಿಬಿ ಫ್ರಾಂಚೈಸಿಯು ಕಾಲಿಸ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2012ರಲ್ಲಿ ಕಾಲಿಸ್ ಕೆಕೆಆರ್ ತಂಡ ಕೂಡಿಕೊಂಡ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
 

3. ಕ್ವಿಂಟನ್ ಡಿ ಕಾಕ್:

ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಮರು ವರ್ಷ ಡಿ ಕಾಕ್ ಅವರನ್ನು ಕೈಬಿಟ್ಟಿತು. ಮರುವರ್ಷವೇ ಮುಂಬೈ ಇಂಡಿಯನ್ಸ್ ಕೂಡಿಕೊಂಡ ಡಿ ಕಾಕ್ ಸತತ ಎರಡು ಐಪಿಎಲ್‌ನಲ್ಲಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
 

4. ಮೋಯಿನ್ ಅಲಿ:

ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿಯನ್ನು 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿತ್ತು. ಆರ್‌ಸಿಬಿ ಪರ ಮೂರು ಸೀಸನ್ ಐಪಿಎಲ್ ಆಡಿದ ಅಲಿಯನ್ನು 2021ರ ಐಪಿಎಲ್‌ಗೂ ಮುನ್ನ ತಂಡದಿಂದ ಕೈಬಿಟ್ಟಿತು. ಮರುವರ್ಷ ಮೋಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕೊಂಡ ಮೋಯಿನ್ ಅಲಿ ಎರಡು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ.
 

5. ರಾಬಿನ್ ಉತ್ತಪ್ಪ:

ರಾಬಿನ್ ಉತ್ತಪ್ಪ ಎರಡು ಹಾಗೂ ಮೂರನೇ ಸೀಸನ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದರು. ಕೆಕೆಆರ್ ತಂಡವು 2014ರಲ್ಲಿ ಚಾಂಪಿಯನ್ ಆಗುವಲ್ಲಿ ಉತ್ತಪ್ಪ ಮಹತ್ವದ ಪಾತ್ರ ವಹಿಸಿದ್ದರು. ಇನ್ನು 2021ರ ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ಚಾಂಪಿಯನ್ ಆಗುವಲ್ಲೂ ಉತ್ತಪ್ಪ ಪ್ರದರ್ಶನ ಮಹತ್ವವಾದದ್ದು.
 

6. ಮನೀಶ್ ಪಾಂಡೆ:

2009ರಲ್ಲಿ ಆರ್‌ಸಿಬಿ ತಂಡದಲ್ಲಿದ್ದಾಗ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರವಾಗಿದ್ದ ಮನೀಶ್ ಪಾಂಡೆ, ಆ ಬಳಿಕ ಕೆಕೆಆರ್ ಕೂಡಿಕೊಂಡರು. 2014ರಲ್ಲಿ ಕೆಕೆಆರ್ ತಂಡವು ಚಾಂಪಿಯನ್ ಆಗುವಲ್ಲಿ ಮನೀಶ್ ಪಾಂಡೆ ಪಾತ್ರ ಮರೆಯುವಂತಿಲ್ಲ.
 

click me!