42ರ ಹರೆಯದಲ್ಲೂ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಯಾವ ಭಾರತೀಯನೂ ಮಾಡದ ದಾಖಲೆ ನಿರ್ಮಿಸಿದ ಧೋನಿ..!

First Published | Apr 15, 2024, 4:26 PM IST

ಮುಂಬೈ: ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಇದೇ ಪಂದ್ಯದಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
 

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ 4ನೇ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ 69 ಹಾಗೂ ಶಿವಂ ದುಬೆ ಬಾರಿಸಿದ ಸ್ಪೋಟಕ 66* ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತ್ತು.

Tap to resize

ಇನ್ನು ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು, ರೋಹಿತ್ ಶರ್ಮಾ ಬಾರಿಸಿದ ಅಜೇಯ ಶತಕ(105)ದ ಹೊರತಾಗಿಯೂ 6 ವಿಕೆಟ್ ಕಳೆದುಕೊಂಡು ಕೇವಲ 186 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಗೆಲುವಿನ ಹೊರತಾಗಿಯೂ, ವಾಂಖೇಡೆ ಮೈದಾನದಲ್ಲಿ ಮತ್ತೊಮ್ಮೆ ಧೋನಿ ಆರ್ಭಟವನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಿತು. 20ನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಧೋನಿ ಕೇವಲ 4 ಎಸೆತಗಳನ್ನು ಎದುರಿಸಿ ಅಜೇಯ 20 ರನ್ ಸಿಡಿಸಿದರು.

ಡೇರಲ್ ಮಿಚೆಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳದ ಧೋನಿ, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಇದರ ಜತೆಗೆ ಭಾರತದ ಯಾವ ಬ್ಯಾಟರ್ ಮಾಡಲಾಗದ ದಾಖಲೆಯನ್ನು ಧೋನಿ ತಮ್ಮ 42ನೇ ಹರೆಯದಲ್ಲಿ ಸಾಧಿಸಿದರು.

ಹೌದು, ಮಹೇಂದ್ರ ಸಿಂಗ್ ಧೋನಿ ಇದೀಗ, ಐಪಿಎಲ್‌ನ ಇನಿಂಗ್ಸ್‌ವೊಂದರಲ್ಲಿ ತಾವೆದುರಿಸಿದ ಮೊದಲ 3 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಇನ್ನು ಇದೇ ಇನಿಂಗ್ಸ್‌ನಲ್ಲಿ ಸುರೇಶ್ ರೈನಾ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 5000 ರನ್ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಪಾತ್ರರಾದರು.

Latest Videos

click me!