ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯಕ್ಕೆ RCB ಸಂಭಾವ್ಯ ತಂಡ ಪ್ರಕಟ..! 2 ಮಹತ್ವದ ಬದಲಾವಣೆ..?

First Published Apr 15, 2024, 2:47 PM IST

ಬೆಂಗಳೂರು(ಏ.15): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಆರ್‌ಸಿಬಿ ಶತಾಯಗತಾಯ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಸನ್‌ರೈಸರ್ಸ್‌ ಎದುರಿನ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದ್ದು, ಆರ್‌ಸಿಬಿ ಸಂಭಾವ್ಯ ತಂಡ ಇಲ್ಲಿದೆ ನೋಡಿ.
 

1. ವಿರಾಟ್ ಕೊಹ್ಲಿ:

ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ಕಳೆದ ಮುಂಬೈ ಇಂಡಿಯನ್ಸ್ ಎದುರು ಸಾಧಾರಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ತವರಿನಲ್ಲಿ ಮತ್ತೆ ದೊಡ್ಡ ಮೊತ್ತ ಕಲೆಹಾಕಲು ವಿರಾಟ್ ಸಜ್ಜಾಗಿದ್ದಾರೆ.
 

2. ಫಾಫ್ ಡು ಪ್ಲೆಸಿಸ್:

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕಳೆದ ಪಂದ್ಯದಲ್ಲಿ ಆಕರ್ಷಕ 61 ರನ್ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು. ಇಂದು ಫಾಫ್ ಮತ್ತೊಮ್ಮೆ ನಾಯಕನಾಟವನ್ನು ಆಡಬೇಕಿದೆ.

3. ವಿಲ್ ಜ್ಯಾಕ್ಸ್‌:

ಇಂಗ್ಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ವಿಲ್ ಕಳೆದ ಪಂದ್ಯದಲ್ಲಿ ಸ್ಫೋಟಕ ಆಟವಾಡುವ ಮುನ್ಸೂಚನೆ ನೀಡಿದರಾದರೂ, ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದರು. ಇದರ ಹೊರತಾಗಿಯೂ ಇಂದು ಜ್ಯಾಕ್ಸ್‌ಗೆ ಮತ್ತೊಂದು ಅವಕಾಶ ಕೊಡುವ ಸಾಧ್ಯತೆಯಿದೆ.

4. ರಜತ್ ಪಾಟೀದಾರ್:

ಕಳೆದ ಕೆಲ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಪಾಟೀದಾರ್ ಕಳೆದ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ್ದರು. ಇದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

5. ಗ್ಲೆನ್ ಮ್ಯಾಕ್ಸ್‌ವೆಲ್:

ಆಸೀಸ್ ಮೂಲದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಬೆಂಗಳೂರಿನಲ್ಲಾದರೂ ಮ್ಯಾಕ್ಸಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

6. ದಿನೇಶ್ ಕಾರ್ತಿಕ್:

ಆರ್‌ಸಿಬಿ ಕೆಳಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಡಿಕೆ 71.50 ಬ್ಯಾಟಿಂಗ್ ಸರಾಸರಿಯಲ್ಲಿ 143 ರನ್ ಬಾರಿಸಿದ್ದು, ಇಂದು ತವರಿನಲ್ಲಿ ಮತ್ತೊಂದು ಸೊಗಸಾದ ಇನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ.
 

7. ಮಹಿಪಾಲ್ ಲೋಮ್ರಾರ್:

ಸ್ಪೋಟಕ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿರುವ ಲೋಮ್ರಾರ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಕೆ ಜತೆ ಮ್ಯಾಚ್ ಫಿನಿಶರ್ ಪಾತ್ರವನ್ನು ನಿಭಾಯಿಸಲು ಸಜ್ಜಾಗಿದ್ದಾರೆ.
 

8. ಲಾಕಿ ಫರ್ಗ್ಯೂಸನ್:

ಆರ್‌ಸಿಬಿಯ ವಿದೇಶಿ ಬೌಲರ್‌ಗಳು ಸಾಕಷ್ಟು ದುಬಾರಿಯಾಗುತ್ತಿರುವುದರಿಂದ ಇಂದು ರೀಸ್ ಟಾಪ್ಲೆ ಬದಲಿಗೆ ಕಿವೀಸ್ ಮೂಲದ ವೇಗಿ ಲಾಕಿ ಫರ್ಗ್ಯೂಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ.
 

9. ವೈಶಾಕ್ ವಿಜಯ್‌ಕುಮಾರ್:

ಕರ್ನಾಟಕದ ವೇಗಿ ವೈಶಾಕ್ ವಿಜಯ್‌ಕುಮಾರ್ ತವರಿನ ಪಿಚ್‌ನಲ್ಲಿ ಮಿಂಚಿನ ದಾಳಿ ನಡೆಸಬಲ್ಲರು. ಹೀಗಾಗಿ ಮತ್ತೊಮ್ಮೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಿಂಚಲು ವೈಶಾಕ್ ಸಜ್ಜಾಗಿದ್ದಾರೆ.
 

10. ಮೊಹಮ್ಮದ್ ಸಿರಾಜ್:

ಆರ್‌ಸಿಬಿ ತಂಡದ ಪ್ರಮುಖ ವೇಗಿ ಸಿರಾಜ್, ಈ ಬಾರಿ 10.40ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಲಯಕ್ಕೆ ಮರಳಲು ಮೊಹಮ್ಮದ್ ಸಿರಾಜ್ ಸಜ್ಜಾಗಿದ್ದಾರೆ.

11. ಯಶ್ ದಯಾಳ್:

ಕಳೆದ ಪಂದ್ಯದಲ್ಲಿ ಆಕಾಶ್ ದೀಪ್‌ ಕೇವಲ 3.3 ಓವರ್‌ಗಳಲ್ಲಿ 55 ರನ್ ನೀಡಿ ದುಬಾರಿಯಾಗಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಆಕಾಶ್‌ದೀಪ್ ಬದಲಿಗೆ ಯಶ್ ದಯಾಳ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

click me!