ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮಾರ್ಚ್ 05ರಂದು ಥಾಯ್ಲೆಂಡ್‌ನಲ್ಲಿರುವ ಕೋಹ್ ಸಾಮಯಿ ದ್ವೀಪದಲ್ಲಿರುವ ವಿಲ್ಲಾದಲ್ಲಿ ದಿಢೀರ್ ಎನ್ನುವಂತೆ ಕೊನೆಯುಸಿರೆಳೆದಿದ್ದರು. ವಾರ್ನ್ ಅವರ ನಿಧನ ಕ್ರಿಕೆಟ್ ಜಗತ್ತಿಗೆ ದೊಡ್ಡ ಶಾಕ್ ನೀಡಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ(708) ಹಾಗೂ ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶೇನ್ ವಾರ್ನ್ 2013ರಲ್ಲಿ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ವಾರ್ನ್ ಗುರುತಿಸಿಕೊಂಡಿದ್ದರು.
ಥಾಯ್ಲೆಂಡ್‌ನಲ್ಲಿರುವ ಕೋಹ್ ಸಾಮಯಿ ದ್ವೀಪದಲ್ಲಿನ ಐಷಾರಾಮಿ ವಿಲ್ಲಾದಲ್ಲಿರುವಾಗಲೇ ವಾರ್ನ್ ಕೊನೆಯುಸಿರೆಳೆದಿದ್ದರು. ವಾರ್ನ್ 14 ದಿನಗಳ ಕಾಲ ಕಠಿಣ ಲಿಕ್ವಿಡ್ ಡಯೆಟ್ ಆರಂಭಿಸಿದ್ದರು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.
ಆಸ್ಪ್ರೇಲಿಯಾದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಕೋಣೆ ಹಾಗೂ ಸ್ನಾನದ ಟವೆಲ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.
‘ವಾರ್ನ್ ಅವರ ಕೋಹ್ ಸಾಮಯಿ ದ್ವೀಪದಲ್ಲಿರುವ ವಿಲ್ಲಾದಲ್ಲಿ ಪರಿಶೀಲನೆ ವೇಳೆ ರಕ್ತದ ಕಲೆಗಳು ಕಂಡುಬಂದಿವೆ. ಹೃದಯಾಘಾತ ವೇಳೆ ತೀವ್ರ ಕೆಮ್ಮಿನಿಂದಾಗಿ ರಕ್ತಸ್ರಾವವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಇನ್ನು, ವಾರ್ನ್ ಸಾವಿಗೂ ಎರಡು ದಿನ ಮುನ್ನವಷ್ಟೇ ಡಯೆಟ್ ಮುಗಿಸಿದ್ದರು ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ‘ವಾರ್ನ್ ದೇಹದ ತೂಕ ಇಳಿಸಲು 14 ದಿನಗಳಿಂದ ಡಯೆಟ್ ಮಾಡುತ್ತಿದ್ದರು. ನಿಧನದ 2 ದಿನ ಮೊದಲು ಡಯೆಟ್ ನಿಲ್ಲಿಸಿದ್ದರು’ ಎಂದಿದ್ದಾರೆ.