ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಲಖನೌ ಸೂಪರ್ ಜೈಂಟ್ಸ್ ಎದುರು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಇನ್ನು ಇದೇ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಮಾಡಿದ ಒಂದು ತಪ್ಪು, ಮುಂದಿನ ಪಂದ್ಯಕ್ಕೆ ನಾಯಕನನ್ನೇ ಹೊರಗಿಟ್ಟು ಆಡುವ ಪರಿಸ್ಥಿತಿ ತಂದುಕೊಳ್ಳುವ ಹಂತದಲ್ಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಂಡ ಎಚ್ಚೆತ್ತುಕೊಂಡಿದ್ದರಿಂದ ಪಂತ್ ಬ್ಯಾನ್ ಆಗುವ ಶಿಕ್ಷೆಯಿಂದ ಬಚಾವಾಗಿದ್ದಾರೆ.
ಹೌದು, ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈಗಾಗಲೇ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಬಾರಿ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿ ದಂಡ ತೆತ್ತಿದೆ. ಇನ್ನೊಮ್ಮೆ ಆ ತಪ್ಪು ಮಾಡಿದ್ರೆ ನಾಯಕ ಪಂತ್ ಒಂದು ಪಂದ್ಯದ ಮಟ್ಟಿಗೆ ಬ್ಯಾನ್ ಆಗಲಿದ್ದಾರೆ.
ಹೌದು, 26 ವರ್ಷದ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ಎದುರು 16ನೇ ಓವರ್‌ನವರೆಗೂ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿತ್ತು. ಆದರೆ ಸ್ಲೋ ಓವರ್‌ರೇಟ್ ಕಡೆ ಗಮನ ಕೊಟ್ಟ ಡೆಲ್ಲಿ ಬೌಲರ್‌ಗಳ ನಿಗದಿತ ಸಮಯದೊಳಗೆ ಬೌಲಿಂಗ್ ಮಾಡಿ ಮುಗಿಸುವ ಮೂಲಕ ಶಿಕ್ಷೆಯಿಂದ ಪಾರಾಗಿದ್ದಾರೆ.
ಒಂದು ವೇಳೆ ನಿಧಾನಗತಿಯಲ್ಲಿ ತಂಡ ಬೌಲಿಂಗ್ ಮಾಡಿದರೆ, ಶಿಕ್ಷೆಯ ರೂಪದಲ್ಲಿ ಕೊನೆಯ ಓವರ್‌ನಲ್ಲಿ 30 ಯಾರ್ಡ್ ಸರ್ಕಲ್ ಹೊರಗೆ 5 ಆಟಗಾರರ ಬದಲಿಗೆ ಕೇವಲ 4 ಆಟಗಾರರು ಮಾತ್ರ ಇರಬೇಕು. ಇದರ ಜತೆಗೆ ದಂಡವನ್ನು ತೆರಬೇಕು.
ಮೊದಲ ಬಾರಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರುಪಾಯಿ ದಂಡ, ಎರಡನೇ ಬಾರಿ ಅದೇ ತಪ್ಪು ಮಾಡಿದರೆ ನಾಯಕನಿಗೆ 24 ಲಕ್ಷ ರುಪಾಯಿ ದಂಡ ಉಳಿದ ಆಟಗಾರರಿಗೆ 6 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ.
ಇನ್ನು ಮೂರನೇ ಬಾರಿ ತಂಡ ಅದೇ ತಪ್ಪು ಮಾಡಿದರೆ, ನಾಯಕನಿಗೆ 30 ಲಕ್ಷ ರುಪಾಯಿ ದಂಡ ಹಾಗೂ ಮುಂದಿನ ಒಂದು ಪಂದ್ಯದ ಮಟ್ಟಿಗೆ ಬ್ಯಾನ್ ಶಿಕ್ಷೆ ಎದುರಿಸಬೇಕಾಗುತ್ತದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇನ್ನೂ ಕೇವಲ 6 ಪಂದ್ಯಗಳನ್ನಷ್ಟೇ ಆಡಿದ್ದು, ಇನ್ನುಳಿದ ಯಾವುದೇ ಪಂದ್ಯದಲ್ಲಿ ಒಮ್ಮೆ ನಿಧಾನಗತಿಯ ಬೌಲಿಂಗ್ ನಡೆಸಿದರೂ, ಮುಂದಿನ ಪಂದ್ಯಕ್ಕೆ ನಾಯಕ ರಿಷಭ್ ಪಂತ್ ಬ್ಯಾನ್ ಶಿಕ್ಷೆ ಎದುರಿಸಬೇಕಾಗುತ್ತದೆ.