ಯುವರಾಜ್ ಸಿಂಗ್ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಯುವರಾಜ್ ಸಿಂಗ್ 2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದು ಯಾರೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಒಂದು ಶತಕ ಸಹಿತ 362 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 15 ಬಲಿ ಪಡೆಯುವ ಮೂಲಕ ಟೀಂ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತದ ಅತ್ಯಂತ ನಂಬಿಗಸ್ಥ ಆಟಗಾರನಾಗಿ ಗುರುತಿಸಿಕೊಂಡಿದ್ದ ಯುವರಾಜ್ ಸಿಂಗ್‌ಗೆ ಕ್ಯಾನ್ಸರ್ ಮಹಾಮಾರಿ ತಗುಲಿದ ವಿಚಾರ ಅವರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು. ಕ್ಯಾನ್ಸರ್ ವಿರುದ್ಧ ಕೆಚ್ಚೆದೆಯ ಹೋರಾಟ ತೋರಿದ ಯುವಿ, ಕ್ಯಾನ್ಸರ್ ಮಣಿಸಿ ಕ್ರಿಕೆಟ್ ಅಂಗಳಕ್ಕೆ ಮರಳಿದ್ದು ಹಲವು ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿ ಎನಿಸಿಕೊಂಡಿತು.
ಯುವಿ ಕ್ಯಾನ್ಸರ್ ಮಣಿಸಿ 2012ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಮತ್ತೆ ಕಮ್‌ಬ್ಯಾಕ್ ಮಾಡಿದರು. ಹೀಗಿದ್ದೂ ಯುವರಾಜ್ ಸಿಂಗ್ ಅವರಿಗೆ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದೊಳಗೆ ಸ್ಥಾನ ಸಿಗಲಿಲ್ಲ.
ಆದರೆ ಛಲಬಿಡದ ಯುವರಾಜ್ ಸಿಂಗ್, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಸಾಧಾರಣ ಪ್ರದರ್ಶನ ತೋರಿದ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಯಿತು. ಆ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದವರು ವಿರಾಟ್ ಕೊಹ್ಲಿ.
ಇದೀಗ ಯುವರಾಜ್ ಸಿಂಗ್ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮನಬಿಚ್ಚಿ ಮಾತನಾಡಿದ್ದಾರೆ. ಯುವಿ ಕ್ರಿಕೆಟ್ ಬದುಕು ಮುಂಚಿತವಾಗಿ ಕೊನೆಯಾಗಲು ಕಾರಣ ಧೋನಿಯಲ್ಲ ಬದಲಾಗಿ ವಿರಾಟ್ ಕೊಹ್ಲಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಯುವರಾಜ್ ಸಿಂಗ್ ಕ್ಯಾನ್ಸರ್ ಸೋಲಿಸಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಅವರು ನಮ್ಮ ಸಹ ಆಟಗಾರರ ಜತೆ ಸೇರಿಕೊಂಡು ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಿದ್ದಾಗ ನಾಯಕರಾದವರು ಅಂತಹ ಆಟಗಾರ ತಂಡಕ್ಕೆ ಕಮ್‌ಬ್ಯಾಕ್ ಮಾಡಿದಾಗ ಆತನ ಜತೆಗೆ ನಿಲ್ಲಬೇಕು. ನಾಯಕರಾಗಿದ್ದವರು ಒಂದು ರೀತಿಯ ಸ್ಟ್ಯಾಂಡರ್ಡ್ ಕಾಯ್ದುಕೊಳ್ಳಬೇಕು ಎಂದು ಉತ್ತಪ್ಪ ಹೇಳಿದ್ದಾರೆ.
ಕೆಲವೊಮ್ಮೆ ನಿಯಮಗಳನ್ನು ಕೆಲವು ಸಂದರ್ಭಗಳಲ್ಲಿ ಸಡಿಲಗೊಳಿಸಿಕೊಳ್ಳಬೇಕು. ಯಾಕೆಂದರೆ ಯುವರಾಜ್ ಕೇವಲ ಟ್ರೋಫಿ ಮಾತ್ರ ಗೆಲ್ಲಿಸಿಲ್ಲ, ಕ್ಯಾನ್ಸರ್ ಅನ್ನು ಸಹ ಸೋಲಿಸಿದ್ದರು. ಅವರು ತಮ್ಮ ಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಬಂದಿದ್ದರು. ಯುವರಾಜ್ ಸಿಂಗ್ ಫಿಟ್ನೆಸ್ ಟೆಸ್ಟ್‌ನಲ್ಲಿ ತಮಗೆ 2 ಅಂಕ ಕಡಿಮೆ ಮಾಡಲು ಕೇಳಿಕೊಂಡಿದ್ದರು. ಆದರೆ ನಾಯಕ ಅದಕ್ಕೆ ಒಪ್ಪಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.
ಇದಾದ ಬಳಿಕ ಯುವರಾಜ್ ಸಿಂಗ್ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದರು. ತಂಡಕ್ಕೂ ಕಮ್‌ಬ್ಯಾಕ್ ಮಾಡಿದರು. ಆದರೆ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಸಂಪೂರ್ಣವಾಗಿ ಹೊರಗಿಡಲಾಯಿತು. ಇದಾದ ಅವರಿಗೆ ತಂಡದಲ್ಲಿ ಅವಕಾಶವೇ ಸಿಗಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.
ಯಾರು ಲೀಡರ್‌ಶಿಪ್ ಗ್ರೂಪ್‌ನಲ್ಲಿದ್ದರೋ ಅವರು ಮತ್ತೆ ಯುವರಾಜ್ ಸಿಂಗ್‌ಗೆ ಅವಕಾಶ ನೀಡಲಿಲ್ಲ. ಆ ಸಮಯದಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದರು. ಅವರ ಕಠಿಣ ವ್ಯಕ್ತಿತ್ವದಿಂದಾಗಿ ಎಲ್ಲವೂ ಅವರು ಅಂದುಕೊಂಡಂತೆ ನಡೆಯುತ್ತಿತ್ತು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.