ವಿಂಡೀಸ್ ಎದುರಿನ ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ: ಯಾವೆಲ್ಲಾ ಆಟಗಾರರಿಗೆ ಸಿಗಲಿದೆ ಸ್ಥಾನ?

First Published | Jul 12, 2023, 1:54 PM IST

ರೋಸೀ(ಜು.12): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜುಲೈ 12ರಿಂದ ಆರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ಗೆ ಕೆಲ ಯುವ ಆಟಗಾರರು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.
 

1. ರೋಹಿತ್ ಶರ್ಮಾ(ನಾಯಕ): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಟೆಸ್ಟ್‌ನಲ್ಲಿ ದೊಡ್ಡ ಇನಿಂಗ್ಸ್ ಆಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಡಲು ಎದುರು ನೋಡುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಹಿಟ್‌ಮ್ಯಾನ್‌, ಕೆರಿಬಿಯನ್ ನಾಡಿನಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
 

2. ಯಶಸ್ವಿ ಜೈಸ್ವಾಲ್‌: 21 ವರ್ಷದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್‌, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದರು. ಇದೀಗ ಜೈಸ್ವಾಲ್‌, ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದು, ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ.

Latest Videos


3. ಶುಭ್‌ಮನ್ ಗಿಲ್‌: ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಗಿಲ್, ಇತ್ತೀಚೆಗಿನ ಕೆಲವು ತಿಂಗಳುಗಳಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಇದೀಗ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅನುಪಸ್ಥಿತಿಯಲ್ಲಿ ಗಿಲ್‌ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವಿಷಯವನ್ನು ಸ್ವತಃ ನಾಯಕ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.

4. ವಿರಾಟ್ ಕೊಹ್ಲಿ: ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ 2022ರಿಂದೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾ ಬಂದಿದ್ದಾರೆ. ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಅರ್ಧಶತಕ ಬಾರಿಸಲು ವಿಫಲವಾಗಿದ್ದ ಕೊಹ್ಲಿ, ಕೆರಬಿಯನ್ನರ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ.

5. ಅಜಿಂಕ್ಯ ರಹಾನೆ: ಟೆಸ್ಟ್ ವಿಶ್ವಕಪ್ ಫೈನಲ್ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಅಜಿಂಕ್ಯ ರಹಾನೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಮತ್ತೊಮ್ಮೆ ಉಪನಾಯಕರಾಗಿ ನೇಮಕವಾಗಿರುವ ರಹಾನೆ, ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ.
 

6. ಇಶಾನ್ ಕಿಶನ್‌: ಬಾರ್ಡರ್-ಗವಾಸ್ಕರ್ ಸರಣಿ ಹಾಗೂ ಟೆಸ್ಟ್ ವಿಶ್ವಕಪ್‌ ಫೈನಲ್‌ನಲ್ಲಿ ಕೆ ಎಸ್ ಭರತ್ ಭರವಸೆ ಉಳಿಸಿಕೊಳ್ಳುವಂತ ಪ್ರದರ್ಶನ ತೋರಿಲ್ಲ. ಹೀಗಾಗಿ ವಿಂಡೀಸ್ ಎದುರು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
 

7. ರವೀಂದ್ರ ಜಡೇಜಾ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಜಡೇಜಾ, ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಮತ್ತೊಮ್ಮೆ ಜಡ್ಡು ಇದೀಗ ವಿಂಡೀಸ್ ಎದುರು ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ.
 

8. ರವಿಚಂದ್ರನ್ ಅಶ್ವಿನ್‌: ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್, ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಬೆಂಚ್ ಕಾಯಿಸುವಂತೆ ಆಗಿತ್ತು. ಆದರೆ ಇದೀಗ ಅಶ್ವಿನ್ ಡೊಮಿನಿಕಾ ಟೆಸ್ಟ್‌ನಲ್ಲಿ ಮತ್ತೊಮ್ಮೆ ಕಮಾಲ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

9. ಶಾರ್ದೂಲ್ ಠಾಕೂರ್: ಮಧ್ಯಮ ವೇಗದ ಬೌಲರ್ ಶಾರ್ದೂಲ್ ಠಾಕೂರ್ 2022ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಶಮಿ ಅನುಪಸ್ಥಿತಿಯಲ್ಲಿ ಠಾಕೂರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

10. ಮೊಹಮ್ಮದ್ ಸಿರಾಜ್: ಹೈದರಾಬಾದ್‌ ಮೂಲದ ಮಾರಕ ವೇಗಿ ಸಿರಾಜ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮಿಂಚಿನ ದಾಳಿ ನಡೆಸಿ 5 ವಿಕೆಟ್ ಕಬಳಿಸಿದ್ದರು. ಶಮಿ ಅನುಸಪಸ್ಥಿತಿಯಲ್ಲಿ ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಸಿರಾಜ್ ಮುಂದಿದೆ.

11. ಜಯದೇವ್ ಉನಾದ್ಕತ್: ದೇಶಿ ಕ್ರಿಕೆಟ್‌ನಲ್ಲಿ ಕರಾರುವಕ್ಕಾದ ದಾಳಿಯ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಎಡಗೈ ವೇಗಿ ಉನಾದ್ಕತ್, ಪ್ರಮುಖ ವೇಗಿಯಾಗಿ ವಿಂಡೀಸ್ ಬ್ಯಾಟರ್ ಕಾಡಲು ಸಜ್ಜಾಗಿದ್ದಾರೆ.

click me!