ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ, ಜೈಸ್ವಾಲ್ ಸರಣಿಯೊಂದರಲ್ಲಿ ಎರಡು ದ್ವಿಶತಕ ಬಾರಿಸಿದ ಕೇವಲ 2ನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾದರು.
2017ರಲ್ಲಿ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ್ದರು. ಇನ್ನು ವಿನೋದ್ ಕಾಂಬ್ಳಿ ಸಹ ಸತತ 2 ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸಿದ್ದರು. ಆದರೆ 2 ಬೇರೆ ಬೇರೆ ಎದುರಾಳಿಗಳ ವಿರುದ್ಧ ದ್ವಿಶತಕ ದಾಖಲಾಗಿತ್ತು.
ಮೊದಲಿಗ: ರಣಜಿ, ದುಲೀಪ್, ಇರಾನಿ ಟ್ರೋಫಿ, ಟೆಸ್ಟ್ ಕ್ರಿಕೆಟ್ ಈ ಎಲ್ಲದರಲ್ಲೂ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಜೈಸ್ವಾಲ್, ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲೂ ಡಬಲ್ ಸೆಂಚುರಿ ಸಿಡಿಸಿದ್ದಾರೆ.
ಸಿಕ್ಸರ್‌ನಲ್ಲೂ ದಾಖಲೆ
ಜೈಸ್ವಾಲ್‌ರ ಇನ್ನಿಂಗ್ಸಲ್ಲಿ ಒಟ್ಟು 12 ಸಿಕ್ಸರ್‌ಗಳಿದ್ದವು. ಆ ಮೂಲಕ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯನ್ನು ಅವರು ಸರಿಗಟ್ಟಿದರು. 1996ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ವಾಸಿಂ ಅಕ್ರಂ ಸಹ 12 ಸಿಕ್ಸರ್ ಬಾರಿಸಿದ್ದರು.
ಇನ್ನು ಇನ್ನಿಂಗ್ಸ್‌ವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮೊದಲ ಆಟಗಾರ ಎನ್ನುವ ದಾಖಲೆ ಸಹ ಜೈಸ್ವಾಲ್ ಪಾಲಾಗಿದೆ. 1994ರಲ್ಲಿ ಲಂಕಾ ವಿರುದ್ಧ ಸಿಧು, 2019ರಲ್ಲಿ ಬಾಂಗ್ಲಾ ವಿರುದ್ಧ ಮಯಾಂಕ್ ತಲಾ 8 ಸಿಕ್ಸರ್ ಬಾರಿಸಿದ್ದರು.
ವಿಶ್ವ ದಾಖಲೆ: ಟೆಸ್ಟ್ ಸರಣಿವೊಂದರಲ್ಲಿ 20 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಗೂ ಯಶಸ್ವಿ ಪಾತ್ರರಾಗಿದ್ದಾರೆ. ಈ ಮೊದಲು 2019ರಲ್ಲಿ ದ.ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ 19 ಸಿಕ್ಸರ್ ಬಾರಿಸಿದ್ದು ದಾಖಲೆ ಎನಿಸಿತ್ತು.
Yashasvi Jaiswal
2018ರಲ್ಲಿ ಬಾಂಗ್ಲಾ ವಿರುದ್ಧ ವಿಂಡೀಸ್‌ನ ಶಿಮ್ರೊನ್ ಹೆಟ್ಮೇಯರ್, 2023ರಲ್ಲಿ ದ.ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ತಲಾ 15 ಸಿಕ್ಸರ್ ಬಾರಿಸಿದ್ದರು.
ಸರಣಿಯಲ್ಲಿ ಇನ್ನೂ 2 ಪಂದ್ಯ ಬಾಕಿ ಇದ್ದು, ಈಗಾಗಲೇ 22 ಸಿಕ್ಸರ್ ಸಿಡಿಸಿರುವ ಜೈಸ್ವಾಲ್, ಇಂಗ್ಲೆಂಡ್ ಮೇಲೆ ಮತ್ತೆ ಸವಾರಿ ಮಾಡಲು ಕಾಯುತ್ತಿದ್ದಾರೆ.