ರಾಹುಲ್ ದ್ರಾವಿಡ್‌ಗೆ ಇಂಗ್ಲೆಂಡ್ ಕ್ರಿಕೆಟ್ ಬಿಗ್ ಆಫರ್.. ಟೆಸ್ಟ್ ಕ್ರಿಕೆಟ್ ಉಳಿಸಲು ಕನ್ನಡಿಗನ ಆಸರೆ ಬಯಸಿದ ECB

Published : Jul 13, 2026, 08:43 AM IST

ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಿಸಲು ಇಸಿಬಿ ಬಯಸಿದ್ದು, ಅದಕ್ಕೆ ದ್ರಾವಿಡ್ ಅವರ ಸಮ್ಮತಿಗಾಗಿ ಕಾಯ್ತಿದೆ ಎಂದು ವರದಿಯಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

PREV
15
ಕ್ರಿಕೆಟ್ ಲೋಕದಲ್ಲಿ ಸಂಚಲನ

ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ 'ಮಿಸ್ಟರ್ ಡಿಪೆಂಡಬಲ್' ರಾಹುಲ್ ದ್ರಾವಿಡ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕಲಮ್ ಅವರನ್ನು ಕೈಬಿಡಲಾಗಿದ್ದು, ಅವರ ಉತ್ತರಾಧಿಕಾರಿಯಾಗಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

25
ಮೆಕಲಮ್‌ಗೆ ಟೆಸ್ಟ್ ಕೋಚ್ ಸ್ಥಾನದಿಂದ ಮುಕ್ತಿ

ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಸೋತ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಕಠಿಣ ನಿರ್ಧಾರ ಕೈಗೊಂಡಿದೆ. ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ 'ಆಶಸ್' ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟೆಸ್ಟ್ ತಂಡದ ಕೋಚ್ ಬದಲಾವಣೆ ಮಾಡಲು ಇಸಿಬಿ ನಿರ್ಧರಿಸಿದೆ. ಬ್ರೆಂಡನ್ ಮೆಕಲಮ್ ಇನ್ನು ಮುಂದೆ ಕೇವಲ ಏಕದಿನ (ODI) ಮತ್ತು ಟಿ20 ತಂಡಗಳಿಗೆ ಮಾತ್ರ ಕೋಚ್ ಆಗಿ ಮುಂದುವರಿಯಲಿದ್ದಾರೆ.

35
ದ್ರಾವಿಡ್ ಮೇಲೆ ಇಂಗ್ಲೆಂಡ್ ಕಣ್ಣು ಏಕೆ?

53 ವರ್ಷದ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ 2024ರ ಟಿ20 ವಿಶ್ವಕಪ್ ಜಯಿಸಿತ್ತು ಹಾಗೂ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿತ್ತು. ದ್ರಾವಿಡ್ ಅವರ ನಿಖರ ಯೋಜನೆ (Meticulous approach) ಮತ್ತು ಟೆಸ್ಟ್ ಕ್ರಿಕೆಟ್ ಬಗ್ಗೆ ಅವರಿಗಿರುವ ಆಳವಾದ ಜ್ಞಾನ ಇಂಗ್ಲೆಂಡ್ ಮಂಡಳಿಯನ್ನು ಆಕರ್ಷಿಸಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

45
ಪೂರ್ಣ ಪ್ರಮಾಣದ ಕೆಲಸಕ್ಕೆ ದ್ರಾವಿಡ್ ಸಿದ್ಧರಿಲ್ಲ?

ವರದಿಯ ಪ್ರಕಾರ, ದ್ರಾವಿಡ್ ಅವರಿಗೆ ಪೂರ್ಣ ಸಮಯದ ಕೋಚ್ ಆಗಿ ಕೆಲಸ ಮಾಡಲು ಆಸಕ್ತಿಯಿಲ್ಲ. ಇಂಗ್ಲೆಂಡ್‌ನ ಟೆಸ್ಟ್ ಕೋಚ್ ಹುದ್ದೆಯು ಅವರಿಗೆ ಹೆಚ್ಚಿನ ಸಮಯ ಮನೆಯಲ್ಲಿ ಕಳೆಯಲು ಅವಕಾಶ ನೀಡುತ್ತದೆ. ತಮಗೆ ಇಷ್ಟವಾದ ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಉಳಿಸಲು ಅವರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಂಡಳಿ ದ್ರಾವಿಡ್ ಅವರ ಅಭಿಪ್ರಾಯ ಕೇಳಲು ಮುಂದಾಗಿದೆ.

55
ರೇಸ್‌ನಲ್ಲಿರುವ ಇತರ ಪ್ರಮುಖರು

ದ್ರಾವಿಡ್ ಮಾತ್ರವಲ್ಲದೆ ಇಂಗ್ಲೆಂಡ್ ಟೆಸ್ಟ್ ಕೋಚ್ ಸ್ಥಾನಕ್ಕೆ ಇನ್ನೂ ಕೆಲವು ದಿಗ್ಗಜರ ಹೆಸರುಗಳು ಕೇಳಿಬರುತ್ತಿವೆ. ಆ್ಯಂಡಿ ಫ್ಲವರ್ ಇಂಗ್ಲೆಂಡ್ ತಂಡದ ಅತ್ಯಂತ ಯಶಸ್ವಿ ಮಾಜಿ ಕೋಚ್. ಇವರ ನೇತೃತ್ವದಲ್ಲಿ ಇಂಗ್ಲೆಂಡ್ ಮೂರು ಬಾರಿ ಆಶಸ್ ಗೆದ್ದಿತ್ತು. ಪ್ರಸ್ತುತ ಐಪಿಎಲ್‌ನಲ್ಲಿ ಆರ್‌ಸಿಬಿ (RCB) ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದಾರೆ. ಗ್ಲಾಮೊರ್ಗನ್ ತಂಡದ ಕೋಚ್ ಆಗಿರುವ ರಿಚರ್ಡ್ ಡಾಸನ್ ಇಂಗ್ಲೆಂಡ್ ಮಂಡಳಿಯ ನೆಚ್ಚಿನ ಅಭ್ಯರ್ಥಿಗಳಲ್ಲಿ ಒಬ್ಬರು. ಶ್ರೀಲಂಕಾದ ಕುಮಾರ್ ಸಂಗಕ್ಕಾರ, ಪಾಕಿಸ್ತಾನದ ಮಾಜಿ ಕೋಚ್ ಮೈಕ್ ಹೆಸನ್, ಆಂಡ್ರ್ಯೂ ಫ್ಲಿಂಟಾಫ್ ಮತ್ತು ಜಸ್ಟಿನ್ ಲ್ಯಾಂಗರ್ ಅವರ ಹೆಸರುಗಳೂ ಪಟ್ಟಿಯಲ್ಲಿವೆ.

ಒಟ್ಟಿನಲ್ಲಿ ದ್ರಾವಿಡ್ ಅವರು ಇಂಗ್ಲೆಂಡ್ ತಂಡದ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ ಎಂಬುದು ಈಗ ಇಡೀ ಕ್ರಿಕೆಟ್ ಲೋಕದ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ದ್ರಾವಿಡ್ ಒಪ್ಪಿಕೊಂಡರೆ, ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಹೊಸ ಪರ್ವ ಆರಂಭವಾಗುವುದರಲ್ಲಿ ಸಂಶಯವಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories