ರಿಂಕು ಸಿಂಗ್ ಹೆಸರು ಕೇಳಿದಾಗಲೆಲ್ಲಾ ಖಂಡಿತವಾಗಿಯೂ ಯಶ್ ದಯಾಳ್ ಹೆಸರು ನೆನಪಾಗುತ್ತದೆ. ಯಾಕೆಂದರೆ 2023ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್ ಎಡಗೈ ವೇಗಿ ಯಶ್ ದಯಾಳ್‌ಗೆ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿ ಅಬ್ಬರಿಸಿದ್ದರು.
ರಿಂಕು ಸಿಂಗ್ ಅಬ್ಬರದ ಎದುರು ಯಶ್ ದಯಾಳ್ ತತ್ತರಿಸಿ ಹೋಗಿದ್ದರು. ಇದಷ್ಟೇ ಅಲ್ಲದೇ ರಿಂಕು ಸ್ಪೋಟಕ ಬ್ಯಾಟಿಂಗ್ ಕಂಡು ಮಾನಸಿಕವಾಗಿಯೂ ಕುಗ್ಗಿಹೋಗಿದ್ದರು ಯಶ್ ದಯಾಳ್. ಈ ಎಲ್ಲಾ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ.
ಇದೀಗ ಯುಪಿ ಟಿ20 ಲೀಗ್‌ನಲ್ಲಿ ರಿಂಕು ಸಿಂಗ್ ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮೀರತ್ ಮರ್ವಿಕ್ಸ್ ಪರ ಕಣಕ್ಕಿಳಿದಿದ್ದ ರಿಂಕು ಸಿಂಗ್, ಕಾಶಿ ರುದ್ರಾಸ್ ಎದುರು ಸೂಪರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮೀರತ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದಾರೆ.
ಮೀರತ್ ಮರ್ವಿಕ್ಸ್ ತಂಡಕ್ಕೆ ಸೂಪರ್ ಓವರ್‌ನಲ್ಲಿ ಗೆಲ್ಲಲು 17 ರನ್ ಅಗತ್ಯವಿತ್ತು. ಆಫ್ ಸ್ಪಿನ್ನರ್ ಶಿವ ಸಿಂಗ್ ಎದುರು ಮೊದಲ ಎಸೆತದಲ್ಲಿ ರನ್ ಗಳಿಸಲಿಲ್ಲ. ಇದಾದ ಬಳಿಕ ಸತತ 3 ಎಸೆತಗಳಲ್ಲಿ 3 ಸಿಕ್ಸರ್ ಚಚ್ಚಿ, ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.
ಸೂಪರ್ ಓವರ್‌ಗೂ ಮುನ್ನ ಮೀರತ್ ಮರ್ವಿಕ್ಸ್ ಹಾಗೂ ಕಾಶಿ ರುದ್ರಾಸ್ ತಂಡಗಳು ನಿಗದಿತ ತಲಾ 181 ರನ್ ಬಾರಿಸಿದ್ದವು. ಮೀರತ್ ಪರ ಮೊದಲಿಗೆ ರಿಂಕು ಸಿಂಗ್ 22 ಎಸೆತಗಳನ್ನು ಎದುರಿಸಿ ಕೇವಲ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ಇದರ ಹೊರತಾಗಿಯೂ ಮೀರತ್ ಫ್ರಾಂಚೈಸಿಯು ರಿಂಕು ಅವರನ್ನು ಸೂಪರ್ ಓವರ್‌ನಲ್ಲಿ ಕಣಕ್ಕಿಳಿಸಿತು. ರಿಂಕು ಹ್ಯಾಟ್ರಿಕ್ ಸಿಕ್ಸರ್ ಚಚ್ಚಿ ಫ್ರಾಂಚೈಸಿ ನಂಬಿಕೆ ಉಳಿಸಿಕೊಳ್ಳುವಲ್ಲಿ ರಿಂಕು ಸಫಲರಾಗಿದ್ದಾರೆ.
ರಿಂಕು ಸಿಂಗ್ ಈಗಾಗಲೇ ಐರ್ಲೆಂಡ್ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಿಂಚಿದ್ದಾರೆ. ಇದೀಗ ರಿಂಕು ಏಷ್ಯನ್ ಗೇಮ್ಸ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಮತ್ತೊಮ್ಮೆ ಅಬ್ಬರಿಸಲು ಎದುರು ನೋಡುತ್ತಿದ್ದಾರೆ.