ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್: ಸಚಿನ್ ರೆಕಾರ್ಡ್ ಮುರಿಯಲು ಕೊಹ್ಲಿಗೆ ಇನ್ನೆಷ್ಟು ರನ್ ಬೇಕು?

First Published | Oct 2, 2024, 3:29 PM IST

ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಹೆಜ್ಜೆಗುರುತುಗಳನ್ನು ದಾಖಲಿಸುತ್ತಾ ಮುನ್ನುಗ್ಗುತ್ತಿದ್ದಾರೆ. ಬನ್ನಿ ನಾವಿಂದು ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ಅತಿಹೆಚ್ಚು ಅಂತಾರಾಷ್ಟ್ರೀಯ ರನ್ ದಾಖಲೆ ಮುರಿಯಲು ಇನ್ನೆಷ್ಟು ರನ್‌ಗಳ ಅಗತ್ಯವಿದೆ ಎನ್ನುವುದನ್ನು ತಿಳಿಯೋಣ.
 

ಟೀಂ ಇಂಡಿಯಾದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ಎದುರಿನ ಕಾನ್ಪುರ ಟೆಸ್ಟ್ ಪಂದ್ಯದ ವೇಳೆಯಲ್ಲಿ ಅತಿವೇಗವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.

35 ವರ್ಷದ ವಿರಾಟ್ ಕೊಹ್ಲಿ ತಮ್ಮ 535ನೇ ಅಂತಾರಾಷ್ಟ್ರೀಯ ಪಂದ್ಯ 594 ಇನ್ನಿಂಗ್ಸ್‌ಗಳನ್ನಾಡಿ 27,000 ರನ್ ಪೂರೈಸಿದ್ದಾರೆ. ಇದಕ್ಕೂ ಮುನ್ನ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್ 623 ಇನ್ನಿಂಗ್ಸ್‌ ಗಳನ್ನಾಡಿ 27 ಸಾವಿರ ರನ್ ಗಡಿ ದಾಟಿದ್ದರು.

Tap to resize

ಭಾರತ ಕಂಡ ದಿಗ್ಗಜ ಬ್ಯಾಟರ್‌ಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ವಿರಾಟ್ ಕೊಹ್ಲಿ ಇದುವರೆಗೂ ಭಾರತ ಪರ 114 ಟೆಸ್ಟ್‌, 295 ಏಕದಿನ ಹಾಗೂ 125 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 27,012 ರನ್ ಬಾರಿಸಿದ್ದಾರೆ. ಈ ಮೂಲಕ ಸದ್ಯ ಅಂತಾರಾಷ್ಟ್ರೀಯ ಸಕ್ರಿಯ ಆಟಗಾರರ ಪೈಕಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ದಂತಕತೆ ಎನಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 

ಮಾಸ್ಟರ್ ಬ್ಲಾಸ್ಟರ್ಸ್‌ ಖ್ಯಾತಿಯ ಸಚಿನ್ ತೆಂಡುಲ್ಕರ್ 34,357 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೇ, ಕುಮಾರ್ ಸಂಗಕ್ಕರ(28,016) ಹಾಗೂ ರಿಕಿ ಪಾಂಟಿಂಗ್(27,483) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡುಲ್ಕರ್ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿಗೂ 7,346 ರನ್‌ಗಳ ವ್ಯತ್ಯಾಸವಿದೆ. ಸಚಿನ್ ತೆಂಡುಲ್ಕರ್ ಗರಿಷ್ಠ ಅಂತಾರಾಷ್ಟ್ರೀಯ ರನ್ ದಾಖಲೆ ಮುರಿಯಲು ಕೊಹ್ಲಿ 7,346 ರನ್ ಬಾರಿಸಬೇಕಿದೆ. 

ಸದ್ಯ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಇನ್ನು ಮೂರರಿಂದ ನಾಲ್ಕು ವರ್ಷಗಳ ಕಾಲ ಒಳ್ಳೆಯ ಫಾರ್ಮ್‌ನಲ್ಲಿ ರನ್ ಗಳಿಸಿದರಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ವಿಶ್ವದಾಖಲೆ ಬ್ರೇಕ್ ಮಾಡಲು ಸಾಧ್ಯವಾಗಲಿದೆ.

Latest Videos

click me!